ಸಾವಕಾಶವಾಗಿ
ಕಪ್ಪು ಬೆಕ್ಕು ಬಳಿಸಾರುತ್ತದೆ
ಎಂದೂ ಮಿಡಿಯದ
ಸ್ಥಾಯಿಗಳಲ್ಲಿ ತಂತಿ ಕಂಪಿಸಿ
ಅಪರಿಚಿತ ನಾದಗಳ ಹೊರಡಿಸುತ್ತವೆ
ಮೂಲೆಗುಂಪಾಗಿದ್ದ ಅಳುವುಗಳು ಬಿಕ್ಕುತ್ತವೆ
ಹತ್ತಿಕ್ಕಿದ್ದ ಅನುಭವಗಳು
ಬಯಲಾಟವಾಡುತ್ತವೆ
ಕಾಣದ ಹಕ್ಕಿಗಳ ಕೇಳದ ಹಾಡು ಕೇಳಿ ಬರುತ್ತದೆ
ಎಂದೂ ಕೇಳದ್ದರಿಂದೇನೋ
ಅವು ಚೀರಿದಂತೆನಿಸುತ್ತದೆ
ಉಸಿರಾಟದ ಭ್ರೂಣಗಳು
ಒಡಲಾಳದಿಂದ ಕೈಕಾಲು ಚಾಚುತ್ತವೆ
ಬೆಳಕಿಗೆ ತೋರಿಸಲಾರದ
ಮಸಿಬಳಿದ ಮುಖಗಳು
ತಮ್ಮ ಅಹವಾಲು ಹೇಳಿಕೊಳ್ಳುತ್ತವೆ ದ್ಯೆನ್ಯದಿಂದ
ಸಂದುಗೊಂದುಗಳಿಂದೆದ್ದು ಬಂದ ಸೈನಿಕರು
ಪಹರೆ ಸುತ್ತುತ್ತಾರೆ
ಕೋಟೆ ಕಟ್ಟುತ್ತಾರೆ ಕರ್ರಗೆ
ನಭೋಮಂಡಲದಲ್ಲೊಂದು
ಹದ್ದು ಕಪ್ಪು ಚಿಕ್ಕೆಯಾಗಿ
ಈ ಸೀಮೆಯ ಸರ್ವೆ ಮಾಡುತ್ತಿರುತ್ತದೆ
ಕಠೋರ ಸತ್ಯಗಳು
ಒಂದೊಂದೇ ಬಯಲಿಗೆ ಬಂದು
ಮೈದೋರತೊಡಗಿದಂತೆಲ್ಲಾ
ಬುದ್ಧನಾಗುವ ಭಯದಿಂದ
ಅಲ್ಲಿಂದ ದೂರ ಓಡುತ್ತೇನೆ.
*****