Home / ಕವನ / ಕವಿತೆ / ಸೂಜಿ-ಗಲ್ಲು

ಸೂಜಿ-ಗಲ್ಲು

ಬೆಂಗಳೂರಲ್ಲಿ ಬಸ್ಸು ಹತ್ತಿದರೆ
ಊರು ಸೇರುವುದೇ ಒಂದು ಬದುಕು.

ಬರ್ರೆಂದು ಬೀಸುತ್ತ ಬರುವ ಸೊಕ್ಕಿದ ಲಾರಿಗಳು
ಪಕ್ಕೆಲುಬು ಮುರಿದು ಬಿಕ್ಕುತ್ತ ಕೂರುತ್ತವೆ.
ನೆಲದ ಮೇಲಿನ ಹಕ್ಕಿಯಾಗುವ ಕಾರುಗಳು
ಹಾಡು ಹರಿದು ಚಿಂದಿಯಾಗಿ ಚೀರುತ್ತವೆ.

ಸಾಯಬೇಕೆನ್ನುವ ಸೇಡಿನಲ್ಲಿ
ಕಣ್ಣುಮುಚ್ಚಾಲೆಯಾಡುವ ರೊಚ್ಚಿನಲ್ಲಿ
ನೆತ್ತರು ಬರೆದ ಬರಹ ಓದಲಾರದೆ
ಕಣ್ಣು ಮುಚ್ಚುತ್ತೇನೆ.

ಇದ್ದಕ್ಕಿದ್ದಂತೆ ಬ್ರೇಕು ಬುಸುಗುಟ್ಟಿದಾಗ
ಥಟ್ಟನೆ ಕಣ್ತೆರೆದು ಪಕ್ಕಕ್ಕೆ ನೋಡುತ್ತೇನೆ-
ಅಲ್ಲಿ ಜೊತೆಗೆ ಬರಲಾಗದೆ ಹಿಂದಕ್ಕೆ ಓಡುವ ಹೊಲಗಳು
ಹೊಲಗಳಲ್ಲಿ ಹಿಂದೆ ಮುಂದೆ ನೋಡದೆ ಎದ್ದ ಹುತ್ತಗಳು!

ಹೊಲದಲ್ಲಿ ಬೆಳೆದ ಈ ಹುತ್ತಗಳಲ್ಲಿ
ಹೂವು ಅರಳಬಾರದೆ ಎಂದುಕೊಳ್ಳುತ್ತೇನೆ
ಆದರೆ ಹಾವು ಬುಸ್ಸೆನ್ನುತ್ತದೆ.

ನಿತ್ಯ ಅದೇ ಗೋಳು ಅದೇ ಬಾಳು
ಫ್ಯೂಡಲ್ ಲಾರಿಗಳು ಕ್ಯಾಪಿಟಲ್ ಕಾರುಗಳು
ಹಿಗ್ಗಾಮುಗ್ಗ ನುಗ್ಗುವ ಕನಸುಗಳು
ನುಚ್ಚುನೂರಾದ ಬಿಡಿಭಾಗಗಳು
ಛಂದಸ್ಸಿನಲ್ಲಿ ಛಿದ್ರವಾದ ಮಾತ್ರೆ ಗಣಗಳು
ಗೊಣಗುತ್ತವೆ; ಒಣಗುತ್ತವೆ ನೂರಾರು ಬಣ್ಣಗಳು.
ಆಗ ನೀರಿಗೆ ಬಿದ್ದ ಸುಣ್ಣವಾಗುತ್ತೇನೆ-
ಹೇಳಿ ಬಂಧುಗಳೇ
ಮತ್ತೆ ಬರಬೇಕೆ ಇಲ್ಲಿಗೆ?
ತಿನ್ನುವ ತುತ್ತು ಅನ್ನಕ್ಕೂ ಕನ್ನ ಹಾಕುವ
ಬಾಳಿನ ಬಗ್ಗೆ ಕನಸುತ್ತ;
ಸಾವಿನ ಲೆಕ್ಕ ಬರೆಯುವ ಬುಕ್ಕಿನಲ್ಲಿ
ಬೆಳ್ಳಿ ಚುಕ್ಕಿಗಳನ್ನು ಬಿಡಿಸುತ್ತ;
ಸೃಷ್ಟಿಬೀಜದ ಬಸುರಿ ಹೊಲಗಳಲ್ಲಿ
ಲಯದ ಭಯ ಬುಸುಗುಡುವ ಹುತ್ತ ಕಾಣುತ್ತ-

ಹೇಳಿ ಬಂಧುಗಳೇ ಹೇಳಿ
ಮತ್ತೆ ಬರಬೇಕೆ ಇಲ್ಲಿಗೆ?
ಬಿಟ್ಟರೂ ಬಿಡದ ಈ ನನ್ನ ಸೂಜಿ-ಗಲ್ಲಿಗೆ!
*****

Tagged:

Leave a Reply

Your email address will not be published. Required fields are marked *

ಎಲೈ ಓದುಗರೇ! ಕಣ್ಣುಗಳನ್ನು ಅಗಲಿಸಿ ಏಕಚಿತ್ತದಿಂದ ಓದಿ! ನಾನೊಂದು ಕಥೆ ಹೇಳಲಿದ್ದೇನೆ. ರೋಮಾಂಚಕಾರಿ, ಮೈನಡುಗಿಸುವಂತಹ ಕಥೆ! ಒಬ್ಬ ಸಾಹಿತಿಯ ಕಥೆ! ಸಾಹಿತಿ ಆಗೇ ತೀರಬೇಕೆಂದು ಹಂಬಲಿಸುವವನ ಕಥೆ! ಸಾಹಿತ್ಯದಲ್ಲಿ ಎಲ್ಲ ಬಿರುದು ಬಹುಮಾನಗಳನ್ನು, ಪ್ರಶಸ್ತಿ ಪ್ರಶಂಸೆಗಳನ್ನು ಹೇಗೆ ಪಡೆ...

“ಎಷ್ಟು ದಿನ ಹೀಗೇ ತೊಂದರೆ ಪಟ್ಟುಕೊಳ್ಳುತ್ತಿರುವದು ಕೃಷ್ಣ ಮೂರ್ತಿ? ಮಕ್ಕಳನ್ನು ಆರಯ್ಯುವದು, ಅಡಿಗೆ ಮಾಡುವದು- ಇವುಗಳಿಗೆಲ್ಲ ಆಳು ಇಟ್ಟು ಪೂರೈಸೀತೇ? ಸುಮ್ಮನೆ ಇನ್ನೊಂದು ಮದುವೆಯಾಗಿ ಬಿಡಬಾರದೇ?” “ಪ್ರೀತಿ ಇಷ್ಟು ಅಗ್ಗ ಅಲ್ಲ ನೋಡು” “ಪ್ರೀತಿಯ ವಿಷಯವೇನೇ ...

ಕಾಲೇಜಿನ ಲೈಬ್ರೆರಿಯಿಂದ ಹೊರಬಂದ ಅವಳು ಒಮ್ಮೆ ಆಟದ ಮೈದಾನವನ್ನು ದಿಟ್ಟಿಸಿ ನೋಡಿದಳು. ಮೈದಾನ ಖಾಲಿ ಇರುವುದನ್ನು ಖಚಿತ ಮಾಡಿಕೊಂಡ ಅವಳು ವೇಗವಾಗಿ ನಡೆಯುತ್ತಾ ರಾಜ ರಸ್ತೆಗೆ ಬಂದಳು. ಅಲ್ಲಿಂದ ತನ್ನ ಮನೆಯ ವಿರುದ್ಧ ದಿಕ್ಕಿಗೆ ಹೆಜ್ಜೆ ಹಾಕ ತೊಡಗಿದಳು. ತನ್ನ ಶಕ್ತಿಯನ್ನೆಲ್ಲಾ ಪ್ರಯ...

ಅಡಿಕೆ ಭತ್ತಗಳ ವ್ಯಾಪಾರದಿಂದ ಅಶ್ವತ್ಥ ಹೆಬ್ಬಾರರು ನೂರಾರು ಸಾವಿರ ರೂಪಾಯಿ ಗಳಿಸಿದರೆಂದು ದಟ್ಟವಾಗಿ ಸುದ್ದಿ ಹಬ್ಬಿತು. ಇದಕ್ಕೆ ಸಾಕ್ಷಿ ಕೊಡುವಂತೆ ಹೆಬ್ಬಾರರು ಗ್ರಾಮದೇವಸ್ಥಾನದಲ್ಲಿ ಒಂದು ಯಜ್ಞವನ್ನು ಮಾಡಿಸುವೆನೆಂದು ಸಾರಿ, ತಯಾರಿ ಮಾಡಹತ್ತಿದರು. ತಟ್ಟೆಯ ಬಿಡಾರದಲ್ಲಿ ಸಾಲೆ ನ...

ಬ್ಯಾಂಕಿನ ಅರೆತೆರೆದ ಬಾಗಿಲನ್ನು ದೂಡಿ ಒಳಬಂದ ಪ್ರಹ್ಲಾದ, ಕೆಲಸದಲ್ಲಿ ಮಗ್ನಳಾಗಿದ್ದ ಸುಮಾಳ ಬಳಿಗೋಡಿ ಅವಳ ಪರ್‍ಸನ್ನು ತಡಕಾಡಿ ಹಣತೆಗೆದುಕೊಂಡು ಬಂದಷ್ಟೇ ವೇಗದಿಂದ ಹೊರಗೋಡಿದ್ದ. “ಏನು ಮಗರಾಯನ ಗಲಾಟೆ” ಹತ್ತಿರದಲ್ಲಿದ್ದ ದಿನಕರನ ಪ್ರಶ್ನೆಗೆ “ಅವನದ್ದು ಯಾವಾ...

ನನ್ನ ಜನ್ಮ ಗ್ರಾಮಕ್ಕೆ ಹೋಗದೆ ನಾಲ್ಕಾರು ವರುಷಗಳಾಗಿದ್ದವು. ಮೇ ತಿಂಗಳ ಬೆವರನ್ನು ತೋಟದ ಅಬ್ಬಿಯಲ್ಲಿ ತೊಳೆದು ತಂಪಾಗಿ ಒಂದು ಮಾಸ ಕಳೆದು ಬರುವ ಎಂದು ಹಳ್ಳಿಗೆ ಹೋಗಿದ್ದೆ. ಮನೆಗೆ ತಲುಪಿದ ಮರುದಿನವೇ ತಂಗಿಯ ಮನೆಗೆ ಹೋಗುವದು ನನ್ನ ಪದ್ಧತಿ. ನಮ್ಮ ಕೇರಿಯ ಎದುರಿನ ಗುಡ್ಡೆಯನ್ನು ಹತ್...