ಗಾಳಿಯಲ್ಲಾವುದೋ ಕೋಗಿಲೆಯು ತನ್ನದೆಯ
ಅಳಲ ತೇಲಿಬಿಡುತ್ತಿದೆ. ದೂರದಲಿ ನೀಲಿಮೆಯ
ಆಗಸದಿಂದೊಂದು ಬಿಳಿಯನ್ನು ಸಿಡಿದಂತೆ
ನಕ್ಷತ್ರ ಮೂಡುತಿರೆ, ಮೂಡಲೋ ಬೇಡವೋ
ಎನುತ ಚಿಂತಿಸುತೊಂದು ಎಳತಾರೆ ಕತ್ತಲಲಿ
ಬೆದರಿ ಹೊದ್ದಿದೆ ಮುಸುಕು ! ಕಾರಂಜಿ ಕೆರೆಯಲ್ಲಿ
ಅಲಗುವುದೊ, ಮಲಗಿಹುದೊ, ಎನುವಂತೆ ಸುಳಿಯುತಿಹ
ಮೆಲ್ಲಲೆಗಳಾಳದಲಿ ನೆರಳುಗಳು ನಡುಗುತಿವೆ!
ಅವು ತೊಟ್ಟ ನೀರಂಗಿಯಲಿ ಕಾಲ ಮಾಡಿಟ್ಟ
ಹರುಕಿನಲಿ, ತಾರೆಗಳ ಛಾಯೆ ಅಲ್ಲಲ್ಲಿರಲು,
ದೂರದಲಿ, ಮೂಡಲಕೆ, ಕಂಬವೊಂದರ ಮೇಲೆ
ಮಂಕಡರಿ ಮಿಣುಕುತಿಹ ದೀಪದರೆನೆರಳೊಂದು
ಅಲೆಗಳಾಳದ ಇರುಳ ಭೇದಿಸುತ ಅತ್ತಿತ್ತ
ಒಸರುತಿದೆ. ಆ ಮೂಲೆಯೊಳಗೊಂದು ಬೆಳ್ವಕ್ಕಿ
ನೀರೊಳಗ ಮೀನುಗಳ ಸಂಸಾರವನು ಹೊಂಚಿ
ಕಾಯುತಿದೆ. ಇತ್ತ ಮೃಗಶಾಲೆಯಲಿ, ಬಂಧನದ
ಕೂಳನುಣ್ಣುತ ಮರುಗಿ, ಬಿಡುಗಡೆಗೆ ಹಂಬಲಿಸಿ,
ಒಲ್ಲದೆಯೆ ಬಲ್ಲಿದರ ಬಿಲ್ಗಳಿಗೆ ನೇಣಾಗಿ,
ಕಾತರದಿ, ಸಂಕಟದಿ, ಇರುಳಲೇ ನರಳುತಿಹ
ಹಾರು ಹಕ್ಕಿಗಳೆದೆಯ ಕೊರಗ ದನಿಯೊಳು ದನಿಯ
ಕೂಡಿಸಿವೆ ಕಾಡ ಹುಲಿ ಸಿಂಹಗಳು, ಅದ ಕೇಳಿ
ಮಾರುದನಿ, ಆ ಕಡೆಗೆ, ಮಾನವನ ಮುಗಿಲಾಸೆ
ಬಿಂಬಿಸುತ, ಚಾಮುಂಡಿ ಬೆಟ್ಟ ನೆಟ್ಟನೆ ನಿಂತು
ಮುಗಿಲಿಗೀಟಿಯ ಹಾಕಲೆನುವಂತೆ ನಿಮಿರಿಹುದ
ಕಂಡು ಹಿಂದೆಗೆಯುತಿದೆ; ಮೌನಕ್ಕೆ ಶರಣಾಗಿ
ನೀರಿನಲ್ಲಿ ಮುಳುಗುತಿದೆ, ನೀರ ಪಕ್ಕದ ಹಾದಿ
ತುಳಿಯುತಿಹ ಗೆಳಯರಗೊ, ಕತ್ತಲಲಿ ಬರಿಯೆರಡು
ನೆರಳಾಗಿ ಸರಿದಿಹರು. ಅವರಲೊಬ್ಬನ ದನಿಯ
ಹೆಣ್ತನದ ಮಾಧುರ್ಯ, ಅಳಿದ ಬಾಳಿನ ಒಂದು
ಸವಿಗನಸ ನನಸಂತೆ, ಹೃದಯದೊಳ ಇಂಚರದಿ
ಹಾಸು ಹೊಕ್ಕಾಗುತಿರೆ, ಮೈ ಮನಸು ಮೇಲೇರಿ
ಆಗಸದ ಮಡಿಲಿನಲಿ ಉಯಾಲೆಯಾಡುತಿಹ
ಬಿಳಿ ಮೋಡದೊಳಗೊಂದು ಕಣವಾಗಿ ಇಣುಕುತಿದೆ.
ಕೇಳುತಿದೆ- ಸ್ವರ್ಗದೊಳಗಿಂತು ಆತ್ಮೀಯತೆಯ,
ಗೆಳೆತನದ, ನೆನಪುಗಳ, ಪ್ರೇಮದುನ್ಮಾದಗಳ
ನೋವು ನಲೆಗಳುಂಟೆ ?- ಇಲ್ಲಿರಲು ಅಲ್ಲೆಲ್ಲಿ?
*****