ಹೇಳು ಸಖೀ ಹೇಳೇ ಆ ಹೆಸರನು
ನನ್ನೀ ಕಿವಿಗಳಲಿ,
ಮಿಡಿಯುತಿದೆ ಅದು ದಿವ್ಯಗಾನವನು
ನನ್ನೆದೆ ವೀಣೆಯಲಿ.
ವಸಂತ ಬಿಡಿಸಿದ ವನದ ಹಾಸಿನಲಿ
ತೇಲಿ ಬಂದ ಹೆಸರು
ವಿರಹಿ ವಿಹಂಗದ ಮಧುರ ಗೀತೆಯಲಿ
ಕಳವಳಿಸಿದೆ ಉಸಿರು
ಸಖಿಯರ ಮುಖದಲಿ ಏನೋ ಬೆರಗು
ಸುಳಿದಿದೆ ಏಕೆ ಸಖಿ?
ಹುಣ್ಣಿಮೆ ಆಡಿದೆ ಬನದಂಗಳದಲಿ
ಏಕೋ ನಾನು ಸುಖಿ!
ಹಿಂದೆಂದೂ ನಾ ಕಾಣದ ಚಂದ
ಹರಸಿದೆ ಸೃಷ್ಟಿಯನೆ,
ಕಾಮನ ಬಿಲ್ಲಿನ ಏಳೂ ಬಣ್ಣ
ಆಳಿದೆ ದೃಷ್ಟಿಯನೆ.
*****
ಪುಸ್ತಕ: ನಿನಗಾಗೇ ಈ ಹಾಡುಗಳು


















