ಹೇಮ೦ತ ಋತುಯೋಗಿ ಮೌನದಲಿ ಘನ-ಸಾಂದ್ರ
ಹಿಮ ಸಮಾಧಿ ಸ್ಥಿತಿಯೊಳೊಪ್ಪಿಹನು; ನಿಶ್ಚಿಂತ
ನಿಶ್ಚಲ ಧ್ಯಾನ ಸನ್ಮುದ್ರೆಯಲಿ ತಪವಾ೦ತ
ಯತಿಯ ರೀತಿಯನೋತು ನಿಂತಿಹನು! ಹಿಮ ರುಂದ್ರ
ಭಾವದಲಿ ಸಕಲ ಭೂಮಿ-ವ್ಯೋಮ ಕರಗಿಹುದು
ಬೂದು ಬಣ್ಣದ ಲೀಲೆಯಲಿ ವ್ಯಾಪ್ತವಾಗಿರುವ
ಸಾಮಸ್ತ್ಯ ಸೂತ್ರದಲಿ ನಿಸ್ಯೂತವೀ ವಿಶ್ವ.
ಪ್ರಾಣಿ ಸಂತತಿಯೆಲ್ಲ ಕುಳಿರ ಕಡಲಿನೊಳಾಳ್ದು.
ಭೂತದಾವೇಶವ೦ತಂತೆ ‘ಗಡಗಡ’ ನಡುಗಿ,
ಬೆಕ್ಕಸಂ ಬಡುತಿಹುದು-ಇದನಾವುದನು ಕೂಡ
ಗಣಿಸದಿಹ ಹಿಮಪುರುಷನಿರವಿನದ್ಭುತ ನೋಡ-
ಅವ್ಯಕ್ತ ಶಕ್ತಿಯಿಂ ವ್ಯೋಮ ವಕ್ಷವನುಡುಗಿ,
ಗಿರಿ-ಶೃಂಗ-ಕಾಂತಾರ-ಭೂಮಿಗಳನಾವರಿಸಿ.
ನಿಂತಿಹನು ವರ ವಿರಾಷಾಕಾರವನು ವಹಿಸಿ.
*****
೧೯೩೫

















