ನನ್ನ ಪಂಕದಲ್ಲಿ ಹುಟ್ಟಿ ಲೇಪವಿಲ್ಲದಿರುವೆ,
ನನ್ನ ಪಂಕಜವೆ !
ನನ್ನ ನೀರಲ್ಲಿ ಬೆಳೆದು ನೀರಾಳದಲ್ಲಿರುವೆ,
ನನ್ನ ನೀರಜವೆ !
ಒಡೆಯಲು ಬಾರದ ಒಡಪಿನಂತಿರುವೆ,
ಬಿಡಿಸಿಲು ಬಾರದ ತೊಡಕಿನಂತಿರುವೆ,
ನನ್ನ ಮಾನಸದ ಮದಗವೆ
ಮುಳುಗಿ ನೋಡಿದೆ. ಮುದ್ದಿಸಿ ನೋಡಿದೆ.
ಮೂಸಿ ನೋಡಿದೆ.
ಮುಟ್ಟಿ ನೋಡಿದೆ. ದಿಟ್ಟಿಸಿ ನೋಡಿದೆ.
ನಿನ್ನಳವು ಅಸದಳವು.
ನಿನ್ನ ತಿಳಿಗೊಳದ ತಳವು ಕಾಣದು.
ಗೋಚರಾಗೋಚರವೆ
ಗಾಳಿಯಂತೆ ಹತ್ತಿ ಹತ್ತಿರವಿದ್ದರೂ
ಮುಗಿಲಂತೆ ಮುತ್ತಿ ಸುತ್ತರಿದಿದ್ದರೂ
ಕೈ ಕಣ್ಣುಗಳಿಗೆ ಬಯಲಾಗಿಹೆ.
ಆದರೆ ಮೃಗಜಲವಾಗಿಯೂ ತಣಿಸುವೆ,
ಸಮೀಪದಲ್ಲಿದ್ದೂ ದಣಿಸುವೆ.
ಯಕ್ಷಾಂಗುಲಿಕೆಯಂತೆ ನಿನ್ನ ತೊಟ್ಟೂ
ನಿನ್ನೆಲ್ಲ ಗುಟ್ಟರಿಯೆ-ನಾನು.
ನವೋನವ ಚಮತ್ಕಾರವೆ ನೀನಾವ ಲೋಕದ ಜೀವಿ?
*****

















