ತನ್ನ ಕೈಯಿಂದಲೇ ಪ್ರಕೃತಿ ಸೃಷ್ಟಿಸಿ ತೆಗೆದ
ಹೆಣ್ಣಮುಖ ನಿನ್ನದು. ನೀ ನನ್ನ ಪ್ರೇಮಕ್ಕೆ
ಸ್ವಾಮಿ ಸತಿ ಎರಡೂ. ಹೆಣ್ಣ ಕೋಮಲ ಹೃದಯ
ಇದ್ದರೂ ನಿನಗಿಲ್ಲ ಹುಸಿ ಹೆಣ್ಣ ಚಂಚಲತೆ.
ಹೆಣ್ಣಿಗಿಂತಲು ಹೊಳಪುಗಣ್ಣು ಹುಸಿಯಿರದ ನಡೆ;
ತಾವು ನೋಡುವ ವಸ್ತುವನ್ನೆ ಅವು ಬೆಳಗಿವೆ.
ಚೆಲುವನಾಗಿರುವೆ, ಚೆಲುವುಗಳನ್ನೆ ಆಳಿರುವೆ,
ಗಂಡುಗಳ ಕಣ್ಸೆಳೆವೆ, ಹೆಣ್ಣ ಬೆರಗಾಗಿಸುವೆ.
ಪ್ರಕೃತಿ ಹೆಣ್ಣಾಗಿಯೇ ನಿನ್ನ ಸೃಷ್ಟಿಸಲಿದ್ದು,
ಮರುಳಾಗಿ ನಿನಗೆ ಬೇರೇನೊ ಮೇಲಿನದಿತ್ತು
ನನ್ನ ಸೋಲಿಸಿತು. ನಿನಗಿತ್ತ ಆ ಹೆಚ್ಚಿನದು
ನನ್ನ ಉದ್ದೇಶಕ್ಕೆ ಎಂದಿಗೂ ಹೊಂದದುದು.
ಹೆಣ್ಣಿಗೆಂದೇ ನಿನ್ನ ಮೈಯ ಕಡೆದಿರಲಾಗಿ
ಪ್ರೀತಿ ನನಗಿರಲಿ, ಸುಖಭೋಗ ಹೆಣ್ಗಳಿಗಿರಲಿ.
*****
ಮೂಲ: ವಿಲಿಯಂ ಷೇಕ್ಸ್‌ಪಿಯರ್
Sonnet 20
A womon’s face with Nature’s own hand painted