ಮಂಥನ – ೯

swirling-light-1209350_960_720Unsplashಸುಶ್ಮಿತಾ, ಅಭಿಯ ಮದುವೆಯ ದಿನಾಂಕ ಗೊತ್ತಾಗಿತ್ತು. ಇನ್ವಿಟೇಷನ್ ಸಿದ್ದವಾಗಿತ್ತು. ಇಬ್ಬರ ಮನೆಯವರೂ ಪರಸ್ಪರ ಸಂತೋಷವಾಗಿ ಒಪ್ಪಿ ಮದ್ವೆ ನಿಶ್ಚಯಿಸಿದ್ದರು.

ಲಗ್ನಪತ್ರಿಕೆಯನ್ನು ತಂದಾ ಸುಶ್ಮಿತಾ ಅಂದು ಬೆಳಗ್ಗೆಯೇ ಅನುವಿನ ಮನೆಗೆ ಬಂದಳು. ನೀಲಾಳಿಗೆ ಆಶ್ಚರ್ಯ. ಎಂದೂ ಬಾರದ ಈ ಹುಡುಗಿ ಮನೆವರೆಗೂ ಅಂತಾ ಹಾರ್ದಿಕವಾಗಿ ಸ್ವಾಗತಿಸಿದಳು. ಅನುವಿನಿಂದ ಸುಶ್ಮಿತಳ ಮದ್ವೆ ಗೊತ್ತಾಗಿರುವುದು ತಿಳಿದಿತ್ತು. ಪತ್ರಿಕೆ ಕೊಡಲು ಬಂದಿರಬೇಕೆಂದು ಊಹಿಸಿದಳು.

“ಬರಬೇಕು, ಬರಬೇಕು ಮದುಮಗಳು. ನಮ್ಮ ಮನೆಗೆ ನೀನು ಬರೋಕೆ ನಿನ್ನ ಮದ್ವೆ ನಿಶ್ಚಯವಾಗುವತನಕ ಕಾಯಬೇಕಾಯ್ತು ನೋಡು. ಅಂತೂ ಬಂದ್ಯಲ್ಲ. ಬಾ. ಅನು ರೂಮಿನಲ್ಲಿದ್ದಾಳೆ ಬಾ” ಎನ್ನುತ್ತ ಅನುವಿನ ರೂಮಿನತ್ತ ಕರೆದೊಯ್ದಳು ನೀಲಾ.

“ಅನು ಯಾರು ಬಂದಿದ್ದಾರೆ ನೋಡು.” ತಲೆ ಬಾಚಿಕೊಳ್ಳುತ್ತಿದ್ದ ಅನುವಿಗೆ ಆಶ್ಚರ್ಯವಾಗಿತ್ತು. ತಮ್ಮ ಮನೆಗಂತೂ ಯಾರೂ ಬರಲ್ಲ. ಮನೆಯ ಪರಿಸ್ಥಿತಿ ಬಗ್ಗೆ ತಿಳಿದಿದ್ದ ಅನು ಮನೆಗೆ ಯಾವ ಗೆಳತಿಯರನ್ನು ಆಹ್ವಾನಿಸುತ್ತಾ ಇರಲಿಲ್ಲ. ಬಂದವರ ಮುಂದೆಲ್ಲ ಅಪ್ಪಾ ಏನಾದರೂ ಅಪ್ಪ, ಅಮ್ಮನ ದಾಂಪತ್ಯದ ಬದುಕು ಜಗಜ್ಜಾಹೀರಾಗುವುದು ಅನುವಿಗೆ ಬೇಕಿರಲಿಲ್ಲ. ಹಾಗಾಗಿ ಯಾರನ್ನು ಇದುವರೆಗೂ ಮನೆಯ ತನಕ ಬರಮಾಡಿಕೊಂಡಿರಲಿಲ್ಲ. ಸುಶ್ಮಿತಳ ಮನೆಗೆ ಅಷ್ಟು ಬಾರಿ ಹೋಗಿದ್ದರೂ, ಅಲ್ಲೇ ಕೆಲವು ಸಲ ಉಳಿದಿದ್ದರೂ ಮನೆಗೆ ಬಾ ಎಂದು ಎಂದೂ ಕರೆದಿರಲಿಲ್ಲ. ಆಮ್ಮನ ಬಲವಂತಕ್ಕೆ ಅಪ್ಪ ಇಲ್ಲದಿದ್ದರೆ ಹುಟ್ಟಿದ ಹಬ್ಬ ಎಂದೋ, ಮತ್ತೇನೋ ಪೂಜೆಗೋ ಕಾಲೇಜಿನ ಗೆಳತಿಯರನ್ನು ಕರೆಯುತ್ತಿದ್ದಳು. ಆದರೆ ಕೆಲಸಕ್ಕೆ ಸೇರಿದ ಮೇಲೆ ಅಭಿಯನ್ನಾಗಲಿ, ಸುಶ್ಮಿತಳನ್ನಾಗಲಿ ಅಥವಾ ಇತರ ಸಹೋದ್ಯೋಗಿಗಳಿಗಂತೂ ಎಂದೂ ಮನೆಗೆ ಬರಲು ಆಹ್ವಾನ ನೀಡಿರಲಿಲ್ಲ. ಈಗ ಸುಶ್ಮಿತಾ ಮನೆ ಹುಡುಕಿ ಬಂದಿದ್ದಾಳೆಂದರೆ ಅಚ್ಚರಿಯೇ ಆಗಿತ್ತು.

“ಬಾ… ಬಾ…” ಎನ್ನುತ್ತ ಬಳಿ ಕರೆದೊಯ್ದು, “ಅಮ್ಮಾ ನಮ್ಮಿಬ್ರಿಗೂ ಇಲ್ಲಿಗೆ ತಿಂಡಿ ತಂದುಬಿಡಮ್ಮ ಪ್ಲೀಸ್” ಎನ್ನುತ್ತ ಬಾಗಿಲನ್ನು ಮುಂದೆ ಮಾಡಿದಳು. ತಂದೆಯ ಕಣ್ಣಿಗೆ ಗೆಳತಿ ಬೀಳುವುದು, ಅವಳನ್ನು ತಂದೆಗೆ ಪರಿಚಯಿಸುವುದು ಈ ಯಾವುದೂ ರಗಳೆ ಅನುವಿಗೆ ಬೇಕಿರಲಿಲ್ಲ. ಎಲ್ಲಾ ಗೊತ್ತಿತ್ತಲ್ಲ ಸುಶ್ಮಿತಾ ಅನುವಿನ ತಂದೆಯನ್ನು ಕಾಣಲು ಯಾವ ಕುತೂಹಲವೂ ತೋರಲಿಲ್ಲ.

ಪರ್ಸಿನಿಂದ ಪತ್ರಿಕೆ ಹೊರ ತೆಗೆದ ಸುಶ್ಮೀತಾ, “ಅನು, ನಮ್ಮ ಮದುವೆಯ ಲಗ್ನ ಪತ್ರಿಕೆಯ ಮೊದಲ ಪ್ರತಿಯನ್ನು ನಿನಗೆ ಕೊಡ್ತಾ ಇದ್ದೀನಿ. ಈ ಅದೃಪ್ಟ ನನ್ನದಾಗಲು ಕಾರಣಕರ್ತೆ ನೀನು. ನೀನು ಬೇಡ ಅಂದ ಅದೃಷ್ಟ ಇಂದು ನನ್ನದಾಗ್ತ ಇದೆ. ಅಭಿಗೆ ನನ್ನ ಮನಸ್ಸಿನಾಳದ ಭಾವನೆಗಳನ್ನು ಮನದಟ್ಟು ಮಾಡಿ, ಅವರ ಪ್ರೀತಿನಾ ನನ್ನ ಕಡೆ ತಿರುಗೋ ಹಾಗೆ ಮಾಡಿದ ಪುಣ್ಯ ನಿನ್ನದು. ಇಲ್ಲದೆ ಇದ್ರೆ ಮನಸ್ಸಿನಲ್ಲಿಯೇ ಆರಾಧಿಸುತ್ತಾ ಸುಮ್ಮನಿದ್ದುಬಿಡ್ತಾ ಇದ್ದೆ. ಅವರ ಮುಂದೆ ಹೇಳಿಕೊಳ್ಳುವಷ್ಟು ಧೈರ್ಯ ನನ್ನಲ್ಲಿರಲಿಲ್ಲ. ಈ ಮದುವೆ ನಡೆಯೋ ಹಾಗೆ ಮಾಡುವಲ್ಲಿ ನಿನ್ನ ಪಾತ್ರನೇ ದೊಡ್ಡದು. ಈ ಋಣನ ನಾ ಹೇಗೆ ತೀರಿಸಲಿ. ಮದುವೆಗೆ ಬಂದು ನಮ್ಮಿಬ್ಬರನ್ನೂ ಹರಸು ಅನು.” ಭಾವೋದ್ವೇಗದಿಂದ ಅನುವಿನ ಕಾಲನ್ನು ಮುಟ್ಟಿಬಿಟ್ಟಳು.

“ಛೇ… ಛೇ ಏನು ಮಾಡ್ತಾ ಇದ್ದಿಯ ನೀನು. ನಾನು ಏನು ಮಾಡಿದೆ ಅಂತ ನೀನು ಇಷ್ಟೊಂದು ಕೃತಜ್ಞತೆ ತೋರ್‍ತಾ ಇದ್ದಿಯಾ. ಅದೂ ಕಾಲು ಮುಟ್ಟಿ ನಮಸ್ಕಾರ ಮಾಡುವಷ್ಟು ನನ್ನನು ದೈವತ್ವಕ್ಕೆ ಏರಿಸ್ತಾ ಇದ್ದಿಯಾ ಸುಶ್ಮಿತಳಾ ನಡೆಯನ್ನು ತೀವ್ರವಾಗಿ ಖಂಡಿಸಿದಳು.

“ನೀನು ದೇವತೆನೇ ಅನು. ನನ್ನ ಪಾಲಿನ ದೇವತೆ. ಈ ದೇವತೆ ಕನಿಕರ ತೋರಿಸದೆ ಇದ್ದಿದ್ರೆ ನಾನು ಅಭಿಯ ಪ್ರೀತಿಯಿಂದ ವಂಚಿತಳಾಗಿ ಸದಾ ಕೊರಗಬೇಕಿತ್ತು. ನೀನು ಬೇಡ ಅಂದಾಗ ಅಭಿ ಬೇರೆ ಯಾರನ್ನಾದರೂ ಮದ್ವೆ ಆಗ್ತಾ ಇದ್ದರು. ನನ್ನ ಅಭಿನಾ ಸೇರೋ ಹಾಗೆ ಮಾಡಿದ ದೇವತೆ ನೀನೂ ಅನು. ನಿನಗೆ ಆ ಅರ್ಹತೆ ಇದೆ ಅನು.”

“ನೀನು ಯಾಕೆ ಇಷ್ಟೊಂದು ಏಕ್ಸೈಟ್ ಆಗ್ತಾ ಇದ್ದಿಯಾ. ನಾನೇನು ಅಂತಹ ಕನಿಕರ ತೋರಿಸಿರುವುದು ನಿಂಗೆ. ಇದೆಲ್ಲ ನಂಗೆ ಇಷ್ಟವಾಗಲ್ಲ. ಅಭಿ ಬಗ್ಗೆ ನನಗೆ ಅಂತಹ ಅಭಿಪ್ರಾಯ ಇರಲಿಲ್ಲ ಅಷ್ಟೆ. ಅದನ್ನ ನಾನು ಅವರಿಗೆ ನೇರವಾಗಿ ತಿಳಿಸಿದೆ. ಅಂತಹ ಅಭಿಪ್ರಾಯ ಇರೋ ಹುಡುಗಿ ಇಲ್ಲಿದ್ದಾಳೆ ಅಂತ ನಿನ್ನ ಬಗ್ಗೆ ಹೇಳಿದೆ. ಇದರಲ್ಲಿ ನಾ ಮಾಡಿದ ಘನಕಾರ್ಯ ಏನು ಸುಶೀ, ನೀನು ಸುಮ್ನೆ ನನ್ನ ಹೊಗಳ್ತಾ ಇದ್ದಿಯಾ. ದೈವತ್ವಕ್ಕೆರಿಸುತ್ತಾ ಇದ್ದಿಯಾ. ಇದೆಲ್ಲಾ ತಪ್ಪು. ಖಂಡಿತಾ ತಪ್ಪು. ಇದನ್ನೆಲ್ಲ ನಿನ್ನ ಮನಸ್ಸಿನಿಂದ ಕಿತ್ತು ಹಾಕು. ನಾನೇನು ತ್ಯಾಗಮಯಿ ಅಲ್ಲಾ. ನನ್ನ ವಸ್ತು ನಾ ನಿಂಗೇನು ಕೊಟ್ಟಿಲ್ಲ. ನಿಂಗೆ ಸೇರಬೇಕಾದ ಅಭಿ ನಿನ್ನ ಸೇರ್‍ತಾ ಇದ್ದಾರೆ. ನಿಮ್ಮಿಬ್ಬರ ಮದುವೆ ಸ್ವರ್ಗದಲ್ಲಿಯೇ ನಡೆದು ಹೋಗಿದೆ. ಇಲ್ಲಿ ನಾನು ನೆಪ ಅಷ್ಟೆ. ನಾನು ಹೇಳದೇ ಇದ್ದರೂ ಇನ್ನೂ ಸ್ವಲ್ಪ ದಿನಗಳಲ್ಲಿ ನಿನ್ನ ಪ್ರೀತಿನಾ ಅವನೇ ಕಂಡು ಹಿಡಿತಾ ಇದ್ದಾ. ನಾನು ಹೇಳಿ ಸ್ವಲ್ಪ ಅವನ ಕೆಲಸನಾ ಹಗುರ ಮಾಡ್ದೆ ಅಷ್ಟೆ. ಮದುವೆಗೆ ನಂದೇ ಓಡಾಟ ಗೊತ್ತಾಯ್ತ. ನನ್ನನ್ನೇನು ನೀನು ಅಕ್ಷತೆ ಕೊಟ್ಟು ಕರೀಬೇಕಾಗಿಲ್ಲ. ಆತ್ಮೀಯ ಗೆಳತಿ ನೀನು. ನಿನ್ನ ಮದ್ವೇಲಿ ನಾನು ಓಡಾಡದೇ ಇದ್ರೆ ಅಗುತ್ತೇನೇ. ಹುಚ್ಚಿ ನೀನು. ಅದಕ್ಕೋಸ್ಕರ ಇಲ್ಲಿವರೆಗೂ ಹುಡುಕಿಕೊಂಡು ಬಂದ್ಯಾ. ಆಫೀಸಲ್ಲಾದರೂ ಹೀಗೆ ಕಾಲು ಹಿಡಿಯೋಕೆ ಆಗಲ್ಲ ಅಂತ.” ರೇಗಿದಳು ಮುನಿಸಿಕೊಂಡಳು. ಕಾಲುಹಿಡಿದಿದ್ದಕ್ಕಾಗಿ ಬೇಸರಿಸಿಕೊಂಡಳು.

“ಈ ಅಮ್ಮ ಇಷ್ಟು ಹೊತ್ತಾದ್ರೂ ಬರಲಿಲ್ಲವಲ್ಲ. ಆಫೀಸಿಗೆ ಲೇಟಾಗುತ್ತದೆ. ಅಮ್ಮಾ ಅಮ್ಮಾ” ಕೂಗು ಹಾಕಿದಳು.

“ಬಂದೇ” ಎನ್ನುತ್ತ ಟ್ರೇ ಹಿಡಿದು ಒಳಬಂದಳು ನೀಲಾ. “ಲೇಟಾಯ್ತು ಅನು. ಮದ್ವೆ ಆಗೋ ಹುಡುಗಿ ಮೊದಲನೆ ಬಾರಿ ನಮ್ಮ ಮನೆಗೆ ಬಂದಿದ್ದಾಳೆ. ಅದೂ ಶುಭ ಸಮಾಚಾರ ಹೊತ್ತು. ಅವಳ ಬಾಯಿ ಸಿಹಿ ಮಾಡದೆ ಕಳಿಸೋಕೆ ಆಗುತ್ತಾ. ಅದಕ್ಕೆ ಆರ್ಜೆಂಟಾಗಿ ಆಗೋ ಸಿಹಿ ಅಂದ್ರೆ ಕೇಸರಿಭಾತೊಂದೆ. ಅದನ್ನೆ ಮಾಡ್ಕೊಂಡು ಬಂದಿದ್ದೀನಿ. ಶ್ಯಾವಿಗೆ ಉಪ್ಟಿಟ್ಟು ಮಾಡಿದ್ದೆ, ಕಾಂಬಿನೇಷನ್ ಸರಿಯಾಯ್ತು. ತಿನ್ತಾ ಇರಿ, ಕಾಫಿ ಬೆರೆಸಿಕೊಂಡು ಬರ್ತೀನಿ.” ಇಬ್ಬರಿಗೂ ತಟ್ಟೆ ನೀಡಿ, ನೀರಿಟ್ಪು ಹೊರ ನಡೆದಳು. ಬಾಗಿಲು ಹಾಕಿಕೊಳ್ಳುವುದನ್ನು ಮರೆಯಲಿಲ್ಲ.

“ನೋಡಿದ್ಯಾ ಸುಶಿ ನಮ್ಮಮ್ಮನ್ನ. ನನ್ನ ಮನಸ್ಸಿನಲ್ಲಿಯೂ ಸಿಹಿ ಕೊಡಬೇಕು ಅನ್ನಿಸಿತ್ತು. ನಿಂಗೆ ಸಿಹಿ ತಿನ್ನಿಸಿಯೇ ಕಳಿಸಬೇಕು ಅಂದುಕೊಂಡೆ. ಆದ್ರೆ ಲೇಟಾಗುತ್ತೆ ಅಂತ ಸುಮ್ಮನಾಗಿಬಿಟ್ಟೆ. ನನ್ನ ಮನಸ್ಸನ್ನು ಹೇಗೆ ಅರ್ಥಮಾಡಿಕೊಳ್ಳುತ್ತಾಳೊ ಏನೋ, ನಾನು ಕೇಳೋಕೆ ಮುಂಚೆನೇ ಮಾಡಿಬಿಡುತ್ತಾಳೆ. ದೇವರು ಒಂದನ್ನು ಕಿತ್ತುಕೊಂಡರೆ ಮತ್ತೊಂದು ಹೆಚ್ಚಾಗಿ ಕೊಡ್ತಾನೆ ಅಂತಾರೆ, ಅದು ನಿಜಾ ಅಲ್ವಾ ಸುಶೀ.” ಭಾವುಕಳಾದಳು ಅನು.

“ಕೇಸರಿಬಾತು ತುಂಬಾ ಚೆನ್ನಾಗಿದೆ ಕಣೆ, ನಿಮ್ಮಮ್ಮನ ಕೈ ಅಡುಗೆ ಅಮೃತ.” ಚಪ್ಪರಿಸುತ್ತಾ ತಿಂದಳು.

ಅನೂ ಇನ್ನೂ ಭಾವನಾ ಪ್ರಪಂಚದಿಂದೀಚೆಗೆ ಬಂದಿರಲಿಲ್ಲ.

“ಅನು, ಆನು. ಅಮ್ಮಂದಿರೇ ಹೀಗೆ ಅನು. ಎಲ್ಲಾ ಕಡೆ ದೇವರನ್ನು ಸೃಷ್ಟಿಸೋಕೆ ಸಾಧ್ಯ ಇಲ್ಲ ಅಂತಾ ಆಮ್ಮಂದಿರನ್ನು ಸೃಷ್ಟಿಸಿದರಂತೆ. ನಿಮ್ಮಮ್ಮನಲ್ಲಿ ಒಂದಂಶ ಜಾಸ್ತಿ ಒಳ್ಳೆತನನಾ ಆ ದೇವರು ತುಂಬಿ ಕಳಿಸಿದ್ದಾನೆ. ನೀನು ಲಕ್ಕಿ ಕಣೆ.” ಅಮ್ಮನ ಹೊಗಳಿಕೆಯಿಂದ ಅನುವಿನ ಹೃದಯ ತೃಪ್ತವಾಯಿತು.

“ಸುಶ್ಮಿತಾ ಅಮ್ಮನ್ನ ಯಾರಾದ್ರೂ ಹೀಗೆ ಹೊಗಳ್ತಾ ಇದ್ರೆ ನಂಗೆ ಅದೆಷ್ಟು ಸಂತೋಷವಾಗುತ್ತೆ ಗೊತ್ತಾ. ನಮ್ಮಮ್ಮನಂಥ ಅಮ್ಮ ಈ ಪ್ರಪಂಚದಲ್ಲಿಯೇ ಇಲ್ಲ ಅನ್ನಿಸಿಬಿಡುತ್ತದೆ. ಇಂಥ ಅಮ್ಮನ್ನ ಸದಾ ಕಣ್ಣೀರಲ್ಲಿ ಕೈತೊಳೆಸ್ತಾ ಇದ್ದಾನಲ್ಲ ನಮ್ಮ ಅಪ್ಪ, ಕೊಂದು ಬಿಡಲಾ ಅನ್ನಿಸಿಬಿಡುತ್ತದೆ. ಯಾವತ್ತಾದರೂ ಒಂದು ದಿನ ಹಾಗೆ ಮಾಡಿಬಿಡ್ತಿನೇನೋ ಅಂತಾ ಭಯವಾಗುತ್ತೆ ಸುಶಿ. ಅಮ್ಮ ಮಾಡಿದ ತಪ್ಪಾದರೂ ಏನು ಸುಶೀ, ನೀನು ಅಭಿನಾ ಪ್ರೀತಿಸಿದೆ. ಮದುವೆ ಆಗಬೇಕು ಅಂತಾ ಬಯಸ್ದೆ. ಒಂದು ವೇಳೆ ವಿಧಿ ನಿನ್ನಿಂದ ಅಭಿನಾ ದೂರ ಮಾಡಿದ್ರೆ ಅದು ನಿನ್ನ ತಪ್ಪಾ. ಆ ತಪ್ಪಿಗಾಗಿ ಜೀವನ ಪರ್ಯಂತ ನೀನು ಶಿಕ್ಷೆ ಅನುಭವಿಸಬೇಕಾ ಸುಶೀ.” ಕಣ್ಣೀರು ಕೆನ್ನೆ ಮೇಲೆ ಹರಿಯಿತು.

“ಅನು, ಅನು. ಇದು ಮನೆ ಕಣೆ, ನಿಮ್ಮಪ್ಪ ಕೇಳಿಸಿಕೊಂಡುಬಿಟ್ಟರೆ, ಕಂಟ್ರೋಲ್ ಮಾಡ್ಕೋ. ಹಣೆಯಲ್ಲಿ ಬರೆದಿದ್ದನ್ನ ಅನುಭವಿಸಲೇಬೇಕು. ಈಗ ನಿಮ್ಮಮ್ಮ ಬಂದುಬಿಡ್ತಾರೆ. ನೀನು ಅಳ್ತಾ ಇರೋದನ್ನ ನೋಡಿ ಗಾಬರಿಯಾಗಲ್ವಾ, ಪ್ಲೀಸ್ ಅನು ಕಣ್ಣ ಒರೆಸಿ ಬಲವಂತಪಡಿಸಿದಳು.

“ಸಾರಿ ಸುಶಿ, ಸಂತೋಷ ಹಂಚಿಕೊಳ್ಳೋಕೆ ಬಂದೋಳ್ಗೆ ನನ್ನ ದುಃಖನಾ ಹಂಚಿಕೊಂಡು ಬಿಟ್ಟೆ. ಈವತ್ತೇನಾಯ್ತು ನಂಗೆ. ಬೇಸರ ಮಾಡ್ಕೋಬೇಡ. ಸಿಹಿ ತಿನ್ನಿಸಿ ನನ್ನಗೋಳು ಕೇಳು ಅಂದಹಾಗೆ ಆಯ್ತು, ಪ್ಲೀಸ್ ತಿನ್ನು ಇನ್ನು ಸ್ವಲ್ಪ ತರಲಾ?”

“ಬೇಡಾ, ಬೇಡಾ. ನನಗೆ ಜಾಸ್ತಿ ಆಯ್ತು. ನೀನು ತಿನ್ನು. ತಟ್ಚೇಲಿ ಹಾಗೇ ಇದೆ. ಆಂಟಿ ಬೇಸರಮಾಡಿಕೊಳ್ಳುತ್ತಾರೆ” ಎನ್ನುವಂತೆ ಒತ್ತಾಯಿಸಿದಳು.

ಹೊರಟು ನಿಂತರು ಇಬ್ಬರೂ. ಸುಶ್ಮಿತಾ ಮತ್ತೊಮ್ಮೆ ಮದುವೆಗೆ ಬರಲೇಬೇಕೆಂದು ಒತ್ತಾಯ ಮಾಡಿ, ಬರದೇ ಇದ್ರೆ ನಿಮ್ಮ ಅನು ಮದ್ವೆಗೆ ನಾನು ಬರೋದೇ ಇಲ್ಲ ಎಂದು ನೀಲಾಳಿಗೆ ಹೆದರಿಕೆ ಹಾಕಿಯೇ ಹೊರಗಡಿ ಇಟ್ಟಳು.

“ಅನು ಮದ್ವೆ ಅದು ಆಗುತ್ತಾ, ನನ್ನ ಮಗಳ ಮದುವೆನಾ ನಾ ನೋಡ್ತಿನಾ. ಅವಳು ಎಲ್ಲರಂತೆ ಗಂಡನ ಜೊತೆ ನಗ್ತಾ ನಗ್ತಾ ಬಾಳೋದನ್ನ, ಮುದ್ದು ಮಗುವಿಗೆ ತಾಯಿಯಾಗುವುದನ್ನ ನೋಡಲು ತನ್ನ ಹಣೆಯಲ್ಲಿ ಬರೆದಿದೆಯಾ?” ವಿಷಣ್ಣತೆಯಿಂದ ನಿಂತೇ ಇದ್ದಳು.

“ಸುಶ್ಮ, ನನ್ ಪ್ರೆಂಡ್ ಒಬ್ರು ಇದ್ದಾರೆ ಅವರಿಗೊಂದು ಇನ್ವಿಟೇಷನ್ ಕೊಡು. ರಾಕೇಶ್ ಅಂತ ನಿಮ್ಹಾನ್ಸ್‌ನಲ್ಲಿದ್ದಾರೆ.”

“ನಿನ್ನ ಫ್ರೆಂಡ್ ನಿಮ್ಹಾನ್ಸಲ್ಲಿದ್ದಾರಾ, ಅಯ್ಯೋ ದೇವರೇ ಫ್ರೆಂಡ್ ಮಾಡಿಕೊಳ್ಳೋಕೆ ಯಾರೂ ಸಿಗಲಿಲ್ಲವಾ ನಿಂಗೆ ಹುಚ್ಚಾಸ್ಪತ್ರೇಲಿ ಇರೋರೇ ಅಗಬೇಕಿತ್ತಾ. ಅದ್ಸರಿ ಅದು ಹೇಗೆ ನಿಂಗೆ ಅವರು ಫ್ರೆಂಡಾದ್ರು.”

ಯಾವುದೋ ಕೆಟ್ಟ ವಿಷಯ ಕೇಳುತ್ತಿರುವಂತೆ ಮುಖ ಮಾಡಿಕೊಂಡು ಕೇಳಿದಳು.

“ಹೇಗೆ ಆಯ್ತು ಅಂದ್ರೆ.” ಮುಂದೆ ಹೇಳಲು ಸಂಕೋಚಿಸಿದಳು. ರಾಕೇಶ್ ತನ್ನನ್ನು ನೋಡಲು ಬಂದಿದ್ದನ್ನು ಸುಶ್ಮಿತಾಗೆ ತಿಳಿಸಿರಲೇ ಇಲ್ಲ. ಈಗ ಹೇಳಿದರೆ ಸುಮ್ಮನೆ ಕಿಚಾಯಿಸುತ್ತಾಳೆ. ಥೂ ನಾನು ರಾಕೇಶ್‌ಗೆ ಕೊಡು ಅಂತನೇ ಹೇಳಬಾರದಿತ್ತು. ಎಷ್ಟೊಂದು ದಿನ ಆಗಿತ್ತಲ್ಲ. ಅವರನ್ನ ನೋಡಿ ಪೋನ್ ಮಾಡಿ ಅಂದಿದ್ರು. ಫೋನ್ ಹೇಗೆ ಮಾಡುವುದೆಂದು ಸುಮ್ಮನಾಗಿಬಿಟ್ಟಿದ್ದೆ. ಅಷ್ಟೊಂದು ಸ್ನೇಹ, ವಿಶ್ವಾಸ ತೋರಿಸಿದ್ದಾರೆ. ಒಂದು ಕೃತಜ್ಞತೆ ಬೇಡವೇ ತನಗೆ. ಅವರ ಅಪ್ಪಾ, ಅಮ್ಮ ಏನಂದುಕೊಂಡಿದ್ದಾರೊ. ಅಷ್ಟೆಲ್ಲಾ ಟ್ರೀಟ್ ಮಾಡಿದ್ದಾರೆ. ಮನೆಯವಳಂತೆ ನಡೆಸಿಕೊಂಡಿದ್ದಾರೆ. ತಾನು ಇದುವರೆಗೂ ಒಂದು ಫೋನ್ ಮಾಡಿಲ್ಲ. ಮತ್ತೆ ಬಾ ಎಂದು ಪದೇ ಪದೇ ಹೇಳಿದ್ದರು. ಹೋಗುವುದಿರಲಿ ಅವರ ವಿಚಾರಿಸೋಕು ಫೋನ್ ಮಾಡ್ಲಿಲ್ಲ. ಸುಶಿಯ ಮದುವೆ ನೆವ ಮಾಡಿ ರಾಕೇಶ್‌ನನ್ನು ಭೇಟಿಯಾಗೋಣ ಅಂದ್ರೆ ಈ ಸುಶ್ಮಿ ಏನೇನೋ ಅನ್ತಾ ಇದ್ದಾಳೆ.

“ಅಮ್ಮ, ಅನುಷಾರವರೇ, ಎಲ್ಲಿ ಕಳೆದುಹೋದ್ರಿ. ನಿಮ್ಮ ಗೆಳೆಯ ಅಲ್ಲೇನು ಮಾಡ್ತಾ ಇರಬಹುದು ಅಂತಾ ಯೋಚನೆ ಮಾಡ್ತಾ ಇದ್ದೀರಾ. ಇನ್ನೇನು ಮಾಡ್ತಾ ಇರ್ತಾರೆ, ಯಾರನ್ನಾದರೂ ಅಟ್ಟಿಸಿಕೊಂಡು ಓಡಾಡ್ತ ಇರ್ತಾರೆ. ಇಲ್ಲ ಮೈ ಎಲ್ಲಾ ಪರಚಿಕೊಳ್ಳುತ್ತಾ ಕೂದಲು ಕಿತ್ತಿಕೊಳ್ತಾ ಹಲ್ಲು ಕಿರಿದು ನಗ್ತಾ ಇರ್ತಾರೆ. ಹುಚ್ಚಾಸ್ಪತ್ರೇಲಿ ಇನ್ನು ಹೇಗೆ ಇರೋಕೆ ಸಾಧ್ಯ.”

“ಷಟ್ ಅಪ್ ಸುಶೀ.” ಕೋಪದಿಂದ ಕೂಗಿದಳು.

“ಯಾಕೆ ಅನು ಕೋಪ. ನಿನ್ನ ಫ್ರೆಂಡ್ನಾ ಹಾಗೆ ಅಂದೆ ಅಂತಾನಾ, ಬಿಡು ಹೋಗಲಿ, ಎಲ್ಲೋ ನೋಡ್ತಾ ಶೂನ್ಯದೆಡೆ ದೃಷ್ಟಿ ನೆಟ್ಟು ಒಂದು ಕಡೆ ಕೂತಿರುತ್ತಾರೆ ಆಯ್ತ?”

“ನೀನು ಸಿನಿಮಾ ನೋಡೋದು ಜಾಸ್ತಿ ಆಯ್ತು. ಅದಕ್ಕೆ ಹುಚ್ಚರ ಆಸ್ಪತ್ರೆ ಅಂದ್ರೆ ಅದೇ ಕಲ್ಪನೆ ನಿಂಗೆ.”

“ಮತ್ತೆ ಹೇಗಮ್ಮ ಇರ್ತಾರೆ, ನಾನಂತು ಯಾವತ್ತೂ ಹುಚ್ಚಾಸ್ಪತ್ರೆಗೆ ಹೋಗಲಿಲ್ಲವಲ್ಲ ನಂಗೆ ಗೊತ್ತಾಗೋದು ಹೇಗೆ?” ಅಮಾಯಕತ್ವ ಪ್ರದರ್ಶಿಸಿದಳು.

“ಸರಿ ಇವತ್ತು ಲಂಚ್ ಟೈಂನಲ್ಲಿ ೧ ಗಂಟೆ ಮುಂಚೆನೇ ಪರ್ಮಿಷನ್ ತಗೊಂಡು ಅಲ್ಲಿಗೆ ಹೋಗೋಣ. ಇನ್ವಿಟೀಷನ್ ಕೊಟ್ಟ ಹಾಗೂ ಆಗುತ್ತೆ. ನೀನು ಹುಚ್ಚಾಸ್ಪತ್ರೆ ನೋಡಿದ ಹಾಗೂ ಆಗುತ್ತೆ. ಆಯ್ತಾ?” ಮುಂದಿನ ಮಾತಿಗಾಗಿ ಕಾಯದೆ ಅಲ್ಲಿಂದ ಸರಿದು ಹೋದಳು.

ಮಧ್ಯಾಹ್ನ ನೇರ ನಿಮ್ಹಾನ್ಸಿಗೆ ಬಂದರು. ರಾಕೇಶ್ ಇರುತ್ತಾರೊ ಇಲ್ಲವೋ ಅನುಮಾನಿಸಿದಳು. ಮೊದ್ಲೆ ತಿಳಿಸಿ ಬರಬೇಕಿತ್ತೇನೋ ಎಂದು ಅಂದುಕೊಂಡಳು. ಸಧ್ಯಕ್ಕೆ ರಾಕೇಶ್ ಇಲ್ಲಿಯೇ ಇದ್ದರು. ರೌಂಡ್ಸ್‌ಗೆ ಹೊರಟಿದ್ದಾರೆ ಅಂತ ತಿಳಿದು ಸಮಾಧಾನದ ಉಸಿರು ಬಿಟ್ಟಳು.

ಅನುವನ್ನು ನೋಡಿದ ರಾಕೇಶ್ ತನ್ನ ಸಂತಸವನ್ನು ಮುಚ್ಚಿಟ್ಬುಕೊಳ್ಳಲಿಲ್ಲ.

“ಬನ್ನಿ ಬನ್ನಿ.” ಅಂತ ಸ್ವಾಗತಿಸಿದ. ಸಡಗರ ಧ್ವನಿಯಲ್ಲಿತ್ತು.

“ಇವಳು ನನ್ನ ಆತ್ಮೀಯ ಗೆಳತಿ ಸುಶ್ಮಿತಾ. ಸದ್ಯದಲ್ಲಿಯೇ ಗೃಹಸ್ತಾಶ್ರಮಕ್ಕೆ ಕಾಲಿಡ್ತಾ ಇದ್ದಾಳೆ. ನಿಮ್ಹಾನ್ಸ್ ನೋಡಬೇಕು ಅಂದಳು ಅದಕ್ಕೆ ಕರ್ಕೊಂಡು ಬಂದೆ.”

“ಸುಶೀ ಇವರು ರಾಕೇಶ್ ಅಂತಾ, ಇಲ್ಲಿ ಡಾಕ್ಟರ್.” ಪರಿಚಯಿಸಿದಳು. ಪರಸ್ಪರ ವಂದಿಸಿದರು.

“ಎಯ್‌ ಅನು ನಿನ್ನ ಫ್ರೆಂಡ್ ಡಾಕ್ಟರು ಅಂತ ಹೇಳಬಾರದೇನೆ. ನಾನ್ಯಾರೋ ಹುಚ್ಚ ಇರಬೇಕು ಅಂತ ಹೆದರಿಕೊಳ್ತಾ ಇದ್ದೆ ಅನುವಿನ ಕಿವಿಯಲ್ಲಿ ಪಿಸು ನುಡಿದಳು.

“ಏನಂತೆ ನಿಮ್ಮ ಫ್ರೆಂಡ್ ಪ್ರಾಬ್ಲಮ್.” ಕುತೂಹಲದಿಂದ ಕೇಳಿದ.

“ಯೇ ಏನಿಲ್ಲ.” ಹೇಳಬೇಡ ಎಂದು ಕಣ್ಸನ್ನೆ ಮಾಡಿದಳು.

ಅನು ನಗುತ್ತಾ, “ನಮ್ಮ ಫ್ರೆಂಡ್ ಒಬ್ಬರು ನಿಮ್ಹಾನ್ಸ್‌ನಲ್ಲಿದ್ದಾರೆ ಅಂದಿದ್ದೆ. ಅದಕ್ಕೆ ಅವಳು ಏನೇನೋ ಕಲ್ಪಿಸಿಕೊಂಡಿದ್ದಳು ಅಷ್ಟೆ.”

“ಅಂದ್ರೆ… ಪಾಗಲ್ ಅಂತ.”

“ಹೌದಾ ಸುಶ್ಮಿತಾ.” ತುಂಟತನದಿಂದ ನಕ್ಕು ಕೇಳಿದ. ಪೆಚ್ಚಾದಳು ಸುಶ್ಮಿತಾ.

“ಅದರಲ್ಲಿ ತಪ್ಪೇನು. ನಮ್ಮ ಅಪ್ಪಾನೇ ಯಾರಾದ್ರೂ ನಿಮ್ಮ ಮಗ ಎಲ್ಲಿದ್ದಾರೆ ಅಂತ ಕೇಳಿದರೆ ಹುಚ್ಚಾಸ್ಪತ್ರೇಲಿ ಅಂತಾರಂತೆ. ಕೇಳಿದವರು ಪಾಪ ಹೀಗಾಗಬಾರದಿತ್ತು ಅಂತಾ ಕನಿಕರ ಪಡ್ತಾರೆ. ಅದಕ್ಕೆ ನಮ್ಮ ಅಪ್ಪ ಮಗ ಎಲ್ಲಿದಾನೆ ಅಂತಾ ಹೇಳೋದನ್ನೆ ಬಿಟ್ಟಿದ್ದಿನಿ ಅಂತಾ ಇರ್ತಾರೆ.” ಜೋಕ್ ಕಟ್ ಮಾಡಿದ.

ಗೆಳತಿಯರಿಬ್ಬರೂ ಜೋರಾಗಿ ನಗತೊಡಗಿದರು.

ಚೆಲುವೆಯರಿಬ್ಬರ ಸ್ವಚ್ಛಂದ ನಗು ಅವನನ್ನು ಮುದಗೊಳಿಸಿತು. ಈ ನಗು ಎಂದೂ ಮಾಸದಿರಲಿ ಎಂದು ಅವನ ಮನಸ್ಸು ಬೇಡಿತು. ಇಂತಹ ಸುಂದರ ನಗು ಎಷ್ಟೋ ಮನಸ್ಸಿನ ಖಾಯಿಲೆಗಳನ್ನ ದೂರ ಮಾಡಿಬಿಡಬಲ್ಲದು ಎಂದೆನಿಸಿತು ಆ ಕ್ಷಣ. ಅವರ ನಗುವನ್ನು ನೋಡುತ್ತಾ ನಿಂತ.

ಮೊದಲು ಸಾವರಿಸಿಕೊಂಡವಳು ಅನು. ನಗುವನ್ನು ನಿಲ್ಲಿಸಿ ಸುಶ್ಮಿ, ಅವರಿಗೆ ಇನ್ವಿಟೇಷನ್ ಕೊಡು ಎಂದಳು.

ನಗುವನ್ನು ನಿಲ್ಲಿಸಲೆತ್ನಿಸುತ್ತಾ, “ಏನ್ ಸಾರ್ ನೀವು ಇಷ್ಟೊಂದು ನಗಿಸುತ್ತೀರಾ, ನೀವು ತುಂಬಾ ಫನ್ನಿ ಸಾರ್. ಐ ಲೈಕ್ ಯೂ.”

“ಆದ್ರೆ ತಡವಾಗಿಬಿಟ್ಟಿತಲ್ಲ.”

“ಯಾಕೆ?” ಅರ್ಥವಾಗದೆ ಕಣ್ಣರಳಿಸಿದಳು.

“ಈ ಚೆಲುವೆಗೊಬ್ಬ ಚೆಲುವ ಸಿಕ್ಕಿಬಿಟ್ಟಿದ್ದಾಳಲ್ಲಾ. ಈಗ ಇಷ್ಟ ಅಂದರೆ ಏನು ಪ್ರಯೋಜನ. ಗ್ರೇಟ್ ಲಾಸ್ ನನಗೆ.”

“ಏನ್ ಸಾರ್ ಹಾಗಂದ್ರೆ, ಚೆಲುವೆ ಯಾರು, ಚೆಲುವ ಯಾರು?” ಅರ್ಥವೇ ಆಗಲಿಲ್ಲ ಸುಶ್ಮಿತಾಳಿಗೆ.

“ಚೆಲುವೆ ಅಂದ್ರೆ ನೀವು, ಚೆಲುವ ಅಂದ್ರೆ ನಿಮ್ಮ ಕೈ ಹಿಡಿಯಲು ಈಗಾಗ್ಲೆ ಸಿದ್ಧವಾಗಿರುವಾತ. ಗ್ರೇಟ್ ಲಾಸ್ ನನಗೆ. ಯಾಕೆ ಗೊತ್ತಾ ಐ ಲೈಕ್ ಅಂದ್ರಲ್ಲ. ಸೇಮ್ ಟೂ ಯೂ ಅನ್ನೋ ಹಾಗಿಲ್ಲವಲ್ಲ ಬಿಡಿಸಿ ಬಿಡಿಸಿ ಹೇಳಿದ.

ನಾಚಿ ಕೆಂಪಾದಳು ಸುಶ್ಮಿತಾ. ಚೆಲುವೆ ಅಂತಾ ನೇರವಾಗಿ ನುಡಿದ ರಾಕೇಶನ ಕಾಂಪ್ಲಿಮೆಂಟ್‌ಗೆ ಕೆನ್ನೆಗಳೆರಡು ಗುಲಾಬಿ ಆದವು. ತಕ್ಪಣವೇ ತನ್ನನ್ನು ಸುಧಾರಿಸಿಕೊಂಡ ಸುಶ್ಮಿತಾ ಅನುವಿನ ಕಡೆ ನೋಡಿದಳು.

ಇವರಿಬ್ಬರ ಮಾತುಗಳನ್ನು ನಸುನಗುತ್ತಾ ಕೇಳಿಸಿಕೊಳ್ಳುತ್ತಾ ಇದ್ದಾಳೆ.

“ಯಾಕ್ಸಾರ್ ನಿಮ್ಗೆ ಇದುವರೆಗೂ ಐ ಲೈಕ್ ಯೂ ಅಂತಾ ಯಾರೂ ಹೇಳಲಿಲ್ಲವೇ?” ಓರೆ ನೋಟದಿಂದ ಅನುವನ್ನೇ ನೋಡುತ್ತಾ ಕೇಳಿದಳು.

“ಈ ಹುಚ್ಚಾಸ್ಪತ್ರೆಯಲ್ಲಿ ಇರೋನು ಯಾರಿಗೆ ತಾನೇ ಇಷ್ಪವಾಗ್ತಾನೆ. ನನ್ನ ಜೀವನದಲ್ಲಿ ನೀವೇ ನೋಡಿ ಮೊಟ್ಟ ಮೊದಲು ಹಾಗಂದಿದ್ದು. ಅದೂ ನಿಮ್ಮ ಮದ್ವೆ ಇನ್ವಿಟೇಷನ್ ಕೊಡ್ತಾ ಹಾಗೆ ಹೇಳಿದ್ರೆ ನಂಗೆಂತ ಸಂಕಟ ಆಗಬಹುದು ಹೇಳಿ,” ಅಳುಮುಖ ಮಾಡಿಕೊಂಡ.

“ಸಾರ್ ನೀವು ತುಂಬಾ ಇಂಟರೆಸ್ಟಿಂಗ್ ಪರ್ಸನ್ ಸಾರ್. ನಿಮ್ಮ ಮಾತು ಕೇಳ್ತಾ ಇದ್ರೆ ಇಲ್ಲೆ ಇದ್ದು ಬಿಡೋಣ ಅನ್ನಿಸುತ್ತೆ.”

“ಅಯ್ಯೋ ಬೇಡಪ್ಪ, ಆಮೇಲೆ ನಿಮ್ಮ ಹುಡುಗ ಬಂದು ನನ್ನ ಮರ್ಡರ್ ಮಾಡ್ತಾರೆ ಅಪ್ಟೇ.” ಭಯ ನಟಿಸಿದ.

ಅನು ಚೆನ್ನಾಗಿ ಇವರಿಬ್ಬರ ಮಾತುಗಳನ್ನು ಎಂಜಾಯ್ ಮಾಡ್ತಾ ಇದ್ಲು.

“ಬರೀ ಮಾತೆ ಆಯ್ತು, ಇವತ್ತು ನೀವಿಬ್ಬರು ನನ್ನ ಗೆಸ್ಟ್. ಒಂದು ಒಳ್ಳೆ ಊಟ ಕೊಡಿಸ್ತಿನಿ. ಆಗಬಹುದಾ?” ಕೇಳಿದ.

ತಟ್ಟನೆ ಅನು ಬಾಯಿ ಹಾಕಿ, “ಒಂದು ಕಂಡಿಷನ್. ಬಿಲ್ ನಾನು ಕೊಡ್ತಿನಿ.”

“ನೀವಿಬ್ರೂ ಬೇಡ. ಗುಡ್ ನ್ಯೂಸ್ ಹೇಳ್ತಾ ಇರೋಳು ನಾನು. ನಾನು ಊಟ ಕೊಡಿಸ್ತಿನಿ. ಯಾರೂ ಬೇರೆ ಮಾತಾಡ ಕೂಡದು.” ಕಟ್ಟುನಿಟ್ಟಾಗಿ ಹೇಳಿಬಿಟ್ಟಳು ಸುಶ್ಮಿತಾ.

ಸರಿ ಎನ್ನುವಂತೆ ತಲೆಯಾಡಿಸಿದರು ಇಬ್ಬರೂ. ಒಳ್ಳೆ ಹೋಟೆಲೊಂದರ ಮುಂದೆ ಕಾರು ಪಾರ್ಕ್ ಮಾಡಿದ ರಾಕೇಶ. ಮೂವರೂ ಊಟ ತರಿಸಿಕೊಂಡರು. ಊಟ ಮಾಡುತ್ತಲೇ ಅಭಿಯ ಬಗ್ಗೆ ಕೇಳಿ ಎಲ್ಲವನ್ನೂ ತಿಳಿದುಕೊಂಡ. ಅನುವನ್ನು ಆತ ಮೆಚ್ಚಿದ ಎಂಬುದನ್ನು ಹೇಳಲಿಲ್ಲ ಇಬ್ಬರೂ.

ಸಿಹಿಯನ್ನು ಸುಶ್ಮಿತಾ ಬಾಯಿಗಿಟ್ಬು “ನಿಮ್ಮ ವೈವಾಹಿಕ ಬದುಕು ಈ ಸಿಹಿಯಂತೆ ಮಧುರವಾಗಿರಲಿ” ಎಂದು ಹಾರೈಸಿದ. ಒಂದೇ ದಿನ ಪರಿಚಯದಲ್ಲಿಯೇ ಇಷ್ಟೊಂದು ಆತ್ಮೀಯತೆ ತೋರಿದ ರಾಕೇಶನ ಸುಶ್ಮಿತಾ ಪ್ರಭಾವಿತಳಾದಳು. ಅವನ ಹಾರೈಕೆಗೆ ಮನ ದ್ರವಿಸಿ ಕಣ್ಣಲ್ಲಿ ನೀರಾಡಿತು. ಯಾರೀತ, ತನ್ನ ಬದುಕು ಸಿಹಿಯಾಗಲಿ ಎಂದು ಹರಸುತ್ತಿದ್ದಾನಲ್ಲ. ಈತ ಇಷ್ಟು ದಿನ ಎಲ್ಲಿದ್ದ.

“ಏಯ್ ಸುಶ್ಮಿತಾ, ಅಭಿಯ ನೆನಪಾಯ್ತಾ, ಈ ಹುಡುಗಿ ಮೇಲೆ ಇಷ್ಟೊಂದು ಮೋಡಿ ಮಾಡಿರೊ ಅಭಿಯನ್ನ ನಾನು ನೋಡಲೇ ಬೇಕು. ಯಾವಾಗ ಭೇಟಿ ಮಾಡಿಸ್ತಿರಾ?”

“ಮದ್ವೆಗೆ ಬರ್‍ತೀರಲ್ಲಾ, ಅಲ್ಲೇ ಭೇಟಿ ಮಾಡಿಸುತ್ತಾಳೆ ಅಲ್ವೆನೇ ಸುಶ್.” ಅವನು ಮದುವೆಗೆ ಬರಲೇಬೇಕೆಂಬ ಒತ್ತಾಯ ಆ ಧ್ವನಿಯಲ್ಲಿತ್ತು.

“ರಾಕೇಶ, ಆವತ್ತು ಇಬ್ರು ಪೇಶೆಂಟ್ ಬಂದಿದ್ರಲ್ಲ ಶಿವಪ್ರಸಾದ್ ಮತ್ತು ಶಾರದ ಆ ಕೇಸು ಏನಾಯ್ತು. ಅವರು ಸರಿ ಹೋದರಾ. ಆವತ್ತಿನಿಂದ ಕುತೂಹಲ ನನ್ನ ಕಾಡ್ತಾ ಇತ್ತು. ಇವತ್ತು ಅದಕ್ಕೆ ಅವಕಾಶ ಸಿಕ್ತು ನೋಡಿ.” ಅಂದಿನದನ್ನು ನೆನಪಿಸಿದಳು.

“ಶಿವಪ್ರಸಾದ್ ಕೇಸಾ, ಈಗ ಹಾಯಾಗಿ ಮದ್ವೆ ಮಾಡ್ಕೊಂಡು ಝುಂ ಅಂತಾ ಇದ್ದಾನೆ. ಸದ್ಯದಲ್ಲಿಯೇ ಅಪ್ಪಾ ಕೂಡ ಆಗ್ತಾ ಇದ್ದಾನೆ.”

“ಹೌದಾ, ಇಷ್ಟು ಬೇಗ ಅವನ ಸಮಸ್ಯೆ ಸಾಲ್ವ್ ಆಯ್ತಾ?” ನಂಬಲಾರದೆ ಕೇಳಿದಳು.

“ಸಮಸ್ಯೆ ಇದ್ರೆ ಅಲ್ವಾ ಸಾಲ್ವ್ ಆಗೋದು. ಅವನದು ಸಮಸ್ಯೆನೇ ಅಲ್ಲಾ. ಆದ್ರೆ ಅದನ್ನ ಹೀಗೆ ಬಿಟ್ಟಿದ್ರೆ ಮುಂದೆ ಸಮಸ್ಯೆ ಖಂಡಿತಾ ಆಗ್ತಾ ಇತ್ತು. ಶಿವಪ್ರಸಾದ್ ಜಾಣ. ನೇರ ನನ್ನ ಹತ್ರಾನೆ ಬಂದ.”

“ಯಾಕೆ ಹಾಗೆ ಆಗಿತ್ತು ಅವನಿಗೆ.” ಕುತೂಹಲವಿತ್ತು ಪ್ರಶ್ನೆಯಲ್ಲಿ.

“ಯಾಕೆ ಅಂದ್ರೆ ಮನೆಯ ವಾತಾವರಣ ಹಾಗಿತ್ತು. ಧಾರ್ಮಿಕ ವಾತಾವರಣ. ಸಹಜ ಬದುಕನ್ನು ಅಲ್ಲಿ ಮುಚ್ಚಿಟ್ಬುಬಿಟ್ಟಿದ್ದರು. ಪೂಜೆ, ವ್ರತ, ಮಡಿ ಅಂತಾ ಅವನಿಗೆ ಯಾವ ವಿಷಯವೂ ತಿಳಿಯದಂತೆ ವಾತಾವರಣ ನಿರ್ಮಾಣ ಮಾಡಿಬಿಟ್ಟಿದ್ದರು. ವಯಸ್ಸಿಗೆ ಸಹಜವಾಗಿ ಕಾಡಬಹುದಾದ ಕಾಮನೆಗಳನ್ನು ನಿರ್ಲಕ್ಷಿಸುವುದೇ ಸರಿ, ಅಂತಹ ಭಾವನೆಗಳೇ ತಪ್ಪು ಎನ್ನುವಂತಹ ಕಲ್ಪನೆಗಳನ್ನು ಅವನಲ್ಲಿ ಉಂಟು ಮಾಡಿಬಿಟ್ಟಿದ್ದರು. ಹದಿಹರೆಯದಲ್ಲಿ ಪರಸ್ಪರ ವಿರುದ್ಧ ಲಿಂಗದವರ ಬಗ್ಗೆ ಮೂಡುವ ಆಸಕ್ತಿಯನ್ನು ವ್ಯಭಿಚಾರವೇನೋ ಅನ್ನುವಂತೆ ಖಂಡಿಸಿ ಶಿಕ್ಷಿಸುತ್ತಿದ್ದರು. ಹೆಣ್ಣು ಮಕ್ಕಳನ್ನು ನೋಡುವುದಿರಲಿ ಅವರೊಂದಿಗೆ ಅಗತ್ಯವಲ್ಲದ ಮಾತುಕತೆಗಳಾಗಲಿ ಆ ಮನೆಯಲ್ಲಿ ತ್ಯಾಜ್ಯವಾಗಿತ್ತು. ಸಹಜವಾದ ಆಸಕ್ತಿಗೆ, ಆಸೆಗಳಿಗೆ ಕಡಿವಾಣ ಹಾಕಿಬಿಟ್ಟಿದ್ದ. ಹೀಗೆಲ್ಲಾ ಮನಸ್ಸನ್ನು ನಿಯಂತ್ರಿಸಿಕೊಂಡು ಈಗ ಒಂದೇ ಬಾರಿಗೆ ಹೆಂಡತಿಯಾದವಳ ಬಳಿ ಹೇಗೆ ಪುರುಷನಾಗಿ ವರ್ತಿಸಬಲ್ಲ. ಮನಸ್ಸು ಅದನ್ನು ನಿರಾಕರಿಸುತ್ತಿತ್ತು. ಹಾಗಾಗಿ ಹೆಣ್ಣಿನ ಸಾಮೀಪ್ಶ ಅವನಲ್ಲಿ ಭೀತಿ ಹುಟ್ಟಿಸಿ ನಿರ್ವಿರ್ಯನನ್ನಾಸಿತ್ತು. ತಾನು ಶಾಶ್ವತವಾಗಿ ಹಾಗೆ ಏನೋ, ತಾನು ಗಂಡಸೇ ಅಲ್ಲವೇನೋ ಎಂದು ತುಂಬಾ ಹೆದರಿ ಬಿಟ್ಟಿದ್ದ. ನಾನು ಹೇಳಿದ್ದನ್ನೆಲ್ಲ ಮಾಡಿದ ಮೇಲೆ, ನನ್ನ ಮಾತುಗಳು ಅವನಲ್ಲಿ ಆತ್ಮವಿಶ್ವಾಸ ತುಂಬಿ, ಮನದ ಭೀತಿಯನ್ನು ಹೋಗಲಾಡಿಸಿಕೊಂಡ. ಈಗ ಆತ ಪರಿಪೂರ್ಣ ಗಂಡಸು.” ವಿವರವಾಗಿ ವಿವರಣೆ ನೀಡಿದ.

ಶಾರದಾ ಕೇಸು, ಆಕೆ ಮೈಮೇಲೆ ದೇವರು ಬರೋದು ದೆವ್ವ ಬರೋದು ಅದೆಲ್ಲಾ ಆಕೆಯ ಗಂಡನನ್ನು ನಿಯಂತ್ರಿಸಲು ಆಕೆಯ ಮನಸ್ಸು ಆಕೆಯ ಅರಿವಿಗೆ ಬಾರದಂತೆ ಹೂಡಿದ ನಾಟಕ. ಗಂಡನ ಕೆಟ್ಟ ಚಟಗಳಮ್ನ ಯಾವ ಪ್ರಯತ್ನದಿಂದಲೂ ತಡೆಯಲು ಅಸಾಧ್ಯವಾದಾಗ, ಅಶಾಂತಗೊಂಡಿದ್ದ ಆಕೆಯ ಮನಸ್ಸು ಈ ಆಟವನ್ನು ಆಡಲು ತೊಡಗಿತ್ತು. ಆಕೆಯ ಚಿಕ್ಕಪ್ಪ ವಿದ್ಯಾವಂತನಾದ್ದರಿಂದ, ಮಂತ್ರ ಮಾಟ ನಂಬದೆ ಸೀದಾ ನನ್ನಲ್ಲಿ ಕರೆತಂದ. ಖಾಯಿಲೆಯ ಮೂಲವೆಲ್ಲಿದೆ, ಅಂತ ಕಂಡುಹಿಡಿದ. ಆ ಮೂಲ ಆತನ ಗಂಡನೇ ಆಗಿದ್ದ. ಆತನನ್ನು ಕರೆಸಿ, ಬುದ್ಧಿ ಹೇಳಿ, ಹೆದರಿಸಿ, ಕೆಟ್ಟ ಚಟ ಬಿಡುವ ಹಾಗೆ ಮಾಡಿದೆ. ಆತನ ಚಟ ದೂರಾದಂತೆ ಆಕೆಯ ಮೈಮೇಲೆ ಬರುವ ದೇವರೋ ದೆವ್ವವೋ ಅವೂ ದೂರಾದವು.

ಒಂದೂ ಅರ್ಥವಾಗದಂತೆ ಕೇಳಿಸಿಕೊಳ್ಳುತ್ತಿದ್ದ ಸುಶ್ಮಿತಳಿಗೆ ರಾಕೇಶನೇ ಅಂದು ಅನು ಆಸ್ಪತ್ರೆಗೆ ಬಂದಿದ್ದೂ, ಆಗ ಈ ಪೇಷೆಂಟ್ಗಳು ಬಂದಿದ್ದು ಎಲ್ಲವನ್ನು ತಿಳಿಸಿದ. ಏಯ್ ಕಳ್ಳಿ, ರಾಕೇಶ್ ಜೊತೆ ಇಷ್ಟು ಓಡಾಡಿದ್ರೂ ಒಂದು ದಿನನೂ ನಂಗೆ ತಿಳಿಸಿಲ್ಲವಲ್ಲ. ನನ್ನತ್ರನೇ ಗುಟ್ಟು ಮಾಡ್ತಿಯಾ. ಇಂತ ಚೆಲುವ, ರಸಿಕ ಮೇಲಾಗಿ ವೈದ್ಯ ಇಷ್ಟೆಲ್ಲ ಅರ್ಹತೆ ಇರೋ ರಾಕೇಶ್ ನಿನ್ನ ಮನಸ್ಸನ್ನು ಗೆಲ್ಲಲಾರದೆ ಹೋಗ್ತಾರಾ ನೋಡೋಣ. ಅದೆಷ್ಟು ದಿನ ಗುಟ್ಟು ಮಾಡ್ತಿಯೋ ಮಾಡು ಮನಸ್ಸಿನಲ್ಲಿ ಅನುವಿಗೆ ಹೇಳುತ್ತಾ

“ಸಾರ್, ನಿಮ್ಮ ಕಂಪನಿ ತುಂಬಾ ಚೆನ್ನಾಗಿತ್ತು. ಇದು ನೆನಪಿನಲ್ಲಿಟ್ಬುಕೊಳ್ಳಲೇಬೇಕಾದ ಭೇಟಿ. ನಿಮ್ಮ ಹಾಸ್ಯ, ನಿಮ್ಮ ಮಾತು ರಿಯಲಿ ವಂಡರ್‍ಫುಲ್. ಮತ್ತೆ ಮತ್ತೆ ಭೇಟಿ ಆಗ್ತಾ ಇರೋಣ. ಮದ್ವೆಗೆ ಬರೋದನ್ನ ಮರೆಯಬೇಡಿ” ಕೈ ಕುಲುಕಿದಳು.

“ನೀವು ಬಂದೇ ಬರ್ತೀರಿ ಅಂತಾ ನಂಗೊತ್ತು” ತುಂಟತನದಿಂದ ಕಣ್ಣು ಮಿನುಗಿಸಿದಳು.

“ಹೇಗೆ ಹೇಳ್ತೀರಾ” ಎಂದ ಅದೇ ತುಂಟತನದಿಂದ.

ಕೈ ಒರೆಸುತ್ತಾ ಇತ್ತ ಬಂದ ಅನುವನ್ನು ಕಣ್ಣಿನಲ್ಲಿಯೇ ತೋರಿಸಿ “ಸರಿನಾ ನಾ ಹೇಳಿದ್ದು” ಎಂದಳು.

ಮಾತಾಡದೆ ಮೆಲುನಕ್ಕ. ಕಣ್ಗಳು ಅನುವನ್ನೇ ತುಂಬಿಕೊಳ್ಳತೊಡಗಿದವು.

ಅವರಿಬ್ಬರನ್ನು ಆಫೀಸಿಗೆ ತಲುಪಿಸಿ ತಾನು ಮನೆಯ ಹಾದಿ ಹಿಡಿದ. ತುಂಟ ಹುಡುಗಿ ಎಷ್ಟು ಬೇಗ ನನ್ನ ಅರ್ಥ ಮಾಡಿಕೊಂಡುಬಿಟ್ಪಳು. ಆ ಕುಶಾಲತನ ತನ್ನ ಹುಡುಗಿಗೇಕಿಲ್ಲವೋ. ಒಂದೇ ಭೇಟಿಯಲ್ಲಿ ನನ್ನ ಮನಸ್ಸನ್ನು ಓದಿಬಿಟ್ಟಳು. ಅನು ಮನಸ್ಸಿನಲ್ಲಿ ಏನಿದೆ ಅಂತ ತಿಳ್ಕೊಬೇಕಾದರೆ ಸುಶ್ಮಿತಳೇ ತನ್ನ ಆನ್ವೇಷಣೆಯ ದಾರಿದೀಪವಾಗಬೇಕು. ಸುಶ್ಮಿತಳನ್ನು ಹಿಡಿದರೆ ತನ್ನ ದಾರಿ ಸುಗಮವಾಗಬಹುದು ಎಂದುಕೊಂಡು ಮದುವೆಯ ದಿನ ಹತ್ತಿರವಾಗಲೆಂದು ಬಯಸಿದ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಸತ್ಯವೇ ನಮ್ಮ ತಾಯಿ ತಂದೆ
Next post ಅಪಪ್ರಚಾರ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ದುರಾಶಾ ದುರ್ವಿಪಾಕ

    "ಒಳ್ಳೇದು, ಅವನನ್ನು ಒಳಗೆ ಬರಹೇಳು" ಎಂದು ಪ್ರೇಮಚಂದನು- ಘನವಾದ ವ್ಯಾಪಾರಸ್ಥನು- ಆಢ್ಯತೆಯಿಂದ, ತಾನು ಆಡುವ ಒಂದೊಂದು ಶಬ್ದವನ್ನು ತೂಕಮಾಡಿ ಚಲ್ಲುವಂತೆ ಸಾವಕಾಶವಾಗಿ ನುಡಿದನು. ಬಾಗಿಲಲ್ಲಿ ನಿಂತಿದ್ದ ವೃದ್ಧ… Read more…

  • ಆನುಗೋಲು

    ರೈಲು ನಿಲ್ದಾಣದಲ್ಲಿ ನಿಂತಿತು! "ಪೇಪರ! ಡೇಲಿ ಪೇಪರ!........ಟಾಯಿಮ್ಸ, ಫ್ರೀ ಪ್ರೆಸ್, ಸಕಾಳ! ಪ್ಲಾಟ ಫಾರ್ಮ ಮೇಲಿನ ಜನರ ನೂರೆಂಟು ಗದ್ದಲದಲ್ಲಿ ಈ ಧ್ವನಿಯು ಎದ್ದು ಕೇಳಿಸುತ್ತಿತ್ತು. ಹೋಗುವವರ… Read more…

  • ಬಸವನ ನಾಡಿನಲಿ

    ೧೯೯೧ರಲ್ಲಿ ನಾ ವಿಭಾಗೀಯ ಸಾರಿಗೆ ಅಧಿಕಾರಿ ಎಂದು ಬಡ್ತಿ ಹೊಂದಿದೆ! ಇಷ್ಟಕ್ಕೆ ಕೆಲವರು ಹೊಟ್ಟೆ ಉರಿ ಬಿದ್ದರು. ಪ್ರಾಮಾಣಿಕರು, ಶೋಷಿತರು, ವಂಚಿತರು, ಪಾಪದವರು, ಮುಂದೆ ಬರಲಿ ಎಂಬ… Read more…

  • ಅವರು ನಮ್ಮವರಲ್ಲ

    ಪೇದೆ ಪ್ರಭಾಕರ ಫೈಲುಗಳನ್ನು ನನ್ನ ಟೇಬಲ್ ಮೇಲೆ ಇಟ್ಟು, ‘ಸರ್ ಸಾಹೇಬರು ನಿಮ್ಮನ್ನು ಕರೆಯುತ್ತಿದ್ದಾರೆ’ ಎಂದು ಹೇಳಿ ಮಾಮೂಲಿನಂತೆ ಹೊರಟು ಹೋದ. ಸಮಯ ನೋಡಿದೆ. ೧೦:೩೦ ಗಂಟೆ.… Read more…