ಕನಸುಗಳು ಕತ್ತಲಲ್ಲಿ ಕರಗಿ ಹೋಗಿ
ಕಣ್ಣು ಮುಚ್ಚಿ ಕುಳಿತಾಗ ಉತ್ತರವಾಗಿ
ಮೆಲ್ಲಗೆ ನಿನ್ನ ಹೆಜ್ಜೆಯ ಸಪ್ಪಳಗಳು
ಇರುವೆಗಳಂತೆ ಸದ್ದು ಮಾಡದೇ
ಮುಚ್ಚಿದ ಬಾಗಿಲುಗಳ ಸಂದಿಯಿಂದ
ಹರಿದು ಬಂದಾಗ ಕಣ್ಣುಗಳ ತುದಿಯಿಂದ
ಹನಿಗಳು ಜಾರಿ ಬಿದ್ದವು ಮಂಕಾದಳು ಅಹಲ್ಯೆ

ಕಾಲುದಾರಿ ರಸ್ತೆರಹದಾರಿ ಏನೊಂದೂ ಆಗದ
ನನ್ನ ಪ್ರೇಮದ ನಡುಗೆ ಬರೀ
ಅವರಿವರ ಕಣ್ಣುಗಳ ನೋಟಗಳ ಅರೆಸುವಿಕೆ
ನೆನೆಪುಗಳು ತೂತು ತೂತಾದ ಜಾಲರಿಯ
ಭಂಗಿಗಳು ಸೋರಿಹೋದ ಕಣಗಳ ನೆನಪು
ಗೋಡೆ ಮೇಲಿನ ಗಡಿಯಾರ ಸುಮ್ಮನೆ
ಬಾರಿಸುತ್ತದೆ. ಗಂಟೆಗಳ ಕಾಯುತ್ತಾ ಕುಳಿತ ಅಹಲ್ಯೆ.

ಸ್ಪರ್ಶದಲಿ ಚಿಗುರಿನಲಿ ಮೌನದಲಿ
ಬೆರಗು ವಿಸ್ಮಯಗಳ ಹಾದಿ ಪಯಣದಲಿ
ಒಂಟಿ ಕಂದೀಲು ಹಿಡಿದು ಕಲ್ಲಾದ ಉಸಿರು
ಓಣಿಯ ತುಂಬೆಲ್ಲಾ ಬರೀ ಕೆಸರು ಯಾವ
ಸೂಚನೆಗಳು ಯೋಚನೆಗಳು ಗಾಳಿಯಲಿ
ನೀಲಿಯಲಿ ನದಿಯಲಿ ಹರಿದು ಬರೆಯಲು
ಕನಸುಗಳ ಬಣ್ಣದ ಎಳೆಗಳ ನೇಯ್ಗೆ, ಎದೆಯ ಮಗ್ಗದಲಿ
ಸ್ಪರ್ಶ ಸುಖದ ಕಾವು ಹರಡುವ ಸೂರ್ಯನಿಗಾಗಿ,
ಕಾಯುತ್ತಾ ಕುಳಿತ ಅಹಲ್ಯೆ ಇವಳು.

ಮೂಡಿಸಿದ ಮೂಡಲಲಿ ಕೆಂಪುಹಿತ
ಬಣ್ಣದೋಕುಳಿ ಆಡಿದ ಸಂಜೆಯ
ಬಾನಿನ ತುಂಬಾ ರೆಕ್ಕೆಗಳ ಬಿಚ್ಚಿ ಹಾರಾಡಿ
ಸಾಗಿದ ಬೆಳ್ಳಕ್ಕಿ ಹಿಂಡು, ಚಂದ್ರನಿಲ್ಲದ
ಇರುಳಲ್ಲಿ ನಕ್ಷತ್ರಗಳ ಲೋಕಗಳ ಚುಕ್ಕಿಗಳು
ಮಿನುಗಿ ಊರೆಲ್ಲಾ ನಿಶ್ಯಬ್ದ ಬಂದೇ ಬರುವ
ಅವನ ಹೆಜ್ಜೆ ಸಪ್ಪಳದಲ್ಲಿ ಕಲ್ಲಾಗಿ ಪವಡಿಸಿದ
ನಾಳೆಯ ಆಗಮಕೆ ಕಾದ ಅಹಲ್ಯೆ.
*****