ಪ್ರಾಣಿಗಳಿಂದ ಕಲೀಬೇಕಾದ್ದು
ಭಾಳ ಭಾಳ ಇದೆಯಪ್ಪ!
ಸ್ಕೂಲಿಗೆ ಹೋಗ್ದೆ ಇದ್ರೂನೂ
ಅವುಗಳ ಬುದ್ಧಿ ಚುರುಕಪ್ಪ!

ನಾವ್ ಹಾಕೋದು ಕೊಂಚ ಅನ್ನ
ಆದ್ರೂ ಅದನ್ನ ನೆನಪಿಟ್ಟು
ನಾಯಿ ಮನೇನ ಕಾಯುತ್ತೆ
ನಿದ್ದೆ ಕೂಡ ಬಿಟ್ಬಿಟ್ಟು!

ಇರುವೆ ಎಷ್ಟೊಂದ್ ಸಣ್ಣನೆ ಪ್ರಾಣಿ
ಆದ್ರೂ ಶಿಸ್ತಿಗೆ ಹೆಸರು,
ನೂರಾರ್‍ ಇದ್ರೂ ಹೋಗ್ತಿರ್‍ತಾವೆ
ಕ್ಯೂನಲ್ಲೇ ಹರಿದು.

ಜಾತಿ ಗೀತಿ ಮಾತೇ ಇಲ್ಲ
ಎಲ್ಲಾ ಒಗ್ಗಟ್ಟಾಗಿ
ಬೇದ ಇಲ್ದೆ ದುಡೀತಾವೆ
ಶಿಸ್ತಿನ ಸಿಪಾಯಿ ಆಗಿ.
*****