ಮುಟ್ಟದಿರು ದೂರಸರಿ, ಎದೆಹೀನ ವಿಷಕನ್ನೆ
ಮೋಹಿಸುವ ಮುಖರೂಪ ಜೇನ್-ಸವಿಯ ರಸಗೆನ್ನೆ
ಸೆರಗು ಮರೆಯಾಗಿರಿಸಿ ಕರೆಯುತಿಹ ಕಣ್-ಸನ್ನೆ.
ತುಂಬಿದೆದೆ, ನಳಿದೋಳು ಚೆಂದುಟಿಯ ರಸದ ಕೆನೆ
ಒಗ್ಗೂಡಿ ನಿನ್ನಲ್ಲಿ ಚಲ್ವಿಕೆಯೆ ಮೈವೆತ್ತು
ಚಣ ಚಣಕು ಚುಂಬಿಸಿದೆ ಕಣ್ಮನಕೆ ರಂಭಿಸಿದೆ
ಚಂದ್ರನೆದೆ ರೋಹಿಣಿಯ ಸವಿಗನಸ ಬಿಂಬಿಸಿದೆ.
ಏನಾದರೇನಿಹುದು? ನಿನ್ನ ಮೈ ರಸತುತ್ತು
ನನ್ನೊಡಲ ಕಡಲಿನಲಿ ವಿಷದ ಹನಿಹನಿಯಾಗಿ
ಬೆರೆಯುತಿದೆ; ಕೊಲ್ಲುತಿದೆ ಪ್ರೀತಿಯನು ತಳ್ಕೈಸಿ
ಗುಣಹೀನ ಚೆಲ್ವಿಕೆಯು ಬರಿರೂಪ ವಿಷರಾಸಿ.
ಒಲವಿರದ ನಿನ್ನೆದೆಯು ಒಡೆದು ಪುಡಿಪುಡಿಯಾಗಿ
ಕೂಡುತಿದೆ ಮಣ್ಣಿನಲಿ. ಕಾಮಕುಂಡದಿ ಸುಟ್ಟು
ಪ್ರೇಮ ದೀಕ್ಷೆಯ ತೊಟ್ಟು ಬಳಿಗೆ ಬಾ-ಮೈಮುಟ್ಟು.
*****

















