
ಭಸ್ಮವಾದರು ದೃಶ್ಯ
ಅಸ್ಮಿ ಎನ್ನುತ್ತಲಿದೆ
ಕಸ್ಮಾತ್? ಅಕಸ್ಮಾತ್ತೋ? ಸಾಕ್ಷಿ! ಹೇಳು.
ಯಾ ಅನಾಹತನಾದ
ಯಾವದೋ ಆಸ್ವಾದ
ಹೃದ್ಗಂಧಿಯಾಮೋದ ಬಂತು ತಾಳು.
ಕ್ಷಣ ಕ್ಷಣ ಅಹಂ ಮೃತಿಯು
ಆದರೂ ಆಕೃತಿಯು
ಸತ್ಯ ವಾಸನೆಯಂತೆ ಸುಳಿಯುತಿಹುದು.
ಆವಾಸ ರಜತವೋ
ಆಸ್ತಿಕ್ಯ ನಿಹಿತವೋ
ಪಾದ ಮೂಡದ ಹಾದಿ ತುಳಿಯುತಿಹುದು.
ಒಂದೆ ಎರಡಾಗುತ್ತ
ಎರಡೆ ಒಂದಾಗುತಿದೆ
ಬರಡೆ ಹಯನಾದಂತೆ ಹೊಳೆಯುತಿಹುದು.
ಕುರುಡಿಗೂ ಸ್ಪರ್ಶವಿದೆ
ಸತ್ತಿಗೆ ವಿಮರ್ಶವಿದೆ
ಉದ್ಭಿಜ್ಜದಂತೇನೊ ಮೊಳೆಯುತಿಹುದು.
ಓ ದೇವ ಕಿರಣವೇ
ಇಹ ಸಹಜ ಹರಣವೇ
ತಮವ ಛೇದಿಸಿ ದಾರಿ ದೀಪವಾಗು.
ಮಣ್ಣಿನಲೆ ಕಣ್ಣಾಗಿ
ಕಣ್ಣಿನಲೆ ಹಣ್ಣಾಗಿ
ಜ್ಯೋತಿ ರಸವೇ ರುಚಿ ಸಮೀಪವಾಗು.
*****
















