ಒಮ್ಮೆ, ಶಿಷ್ಯನೊಬ್ಬ ಗುರುಗಳಲ್ಲಿ ಬಂದು ಪೆಚ್ಚು ಮುಖ ಹಾಕಿಕೊಂಡು ಕುಳಿತ. ಶಿಷ್ಯನ ಮುಖವನ್ನು ನೋಡಿ ಅವನ ಮನದ ಕಲ್ಲೋಲವನ್ನು ಗಮನಿಸಿದ ಗುರುಗಳು-
“ಶಿಷ್ಯಾ! ನಿನ್ನ ಕಾಡುತ್ತಿರುವ ವಿಷಯವೇನು?” ಎಂದರು. “ಗುರುಗಳೇ! ವನ ವನ ಸುತ್ತಾಡಿದೆ. ಕಾಡು ಮೇಡು ಅಲೆದಾಡಿದೆ. ಬೆಟ್ಟ ಗುಡ್ಡ ಹತ್ತಿದೆ. ಸಮುದ್ರಯಾನ ಮಾಡಿದೆ. ಆಗಸವ ಅವಲೋಕಿಸಿದೆ. ಆದರೆ ನನ್ನ ಮನದಲ್ಲಿ ಒಂದು ರೀತಿಯ ಆಂದೋಲನವಿದೆ. ವನ ವನವ ಸುತ್ತಿದಾಗ, ಅದೆಷ್ಟು ವಿಧದ ಸಸ್ಯಾಕಾರ, ಅದೆಷ್ಟು ವಿಧದ ಬಣ್ಣ, ಮೋಹಕ ಹಸಿರಿನ ಪ್ರದರ್ಶನ ಇದರ ಸ್ವಚ್ಛಂಧತೆಯಲ್ಲಿ ನನ್ನ ಕಣ್ಣು ಕಾಣಬೇಕಾದುದೇನು? ಅದರ ನಿಜ ಮರ್ಮ ನನ್ನ ಅರಿವಿಗೆ ಬರುತ್ತಿಲ್ಲ. ಕಾಡುಮೇಡುಗಳಲ್ಲಿ ಅಲೆದಾಡುವಾಗ ವಿವಿಧ ಖಗಮೃಗಗಳ, ವೈವಿಧ್ಯತೆಯಲ್ಲಿ ತಡಕಾಡಿದೆ, ಹುಡುಕಾಡಿದೆ ಕೊನೆಗೆ ಅರ್ಥವಿಸದಾದೆ. ಇನ್ನು ಆಕಾಶವನ್ನು ಅವಲೋಕಿಸುವಾಗ ಆ ವಿಸ್ತಾರ ನೀಲಿಮೆ; ಅಪಾರ ನಕ್ಷತ್ರಮಾಲೆ; ಬೆಳಗು ರಾತ್ರಿಯಲ್ಲಿ ಚಂದ್ರಸೂರ್ಯ ಗ್ರಹ ನಿಹಾರಿಕೆಗಳ ವೈಭವ. ಅರ್ಥವಿಸಲಾರದ ಅನಂತತೆ ನನ್ನ ದಿ಼ಙ್ಮೂಢನನ್ನಾಗಿ ಮಾಡಿತು. ಇನ್ನು ಸಮುದ್ರಯಾನ ಮಾಡುವಾಗ ಆ ಜಲ ಸಮಾವೇಶದಲ್ಲಿ ಅದೆಷ್ಟು ರಭಸ, ಅದೆಷ್ಟು ಸೆಳೆತ, ಅದೆಷ್ಟು ಭೋರ್ಗರತೆ, ಅದೆಷ್ಟು ಜೀವಚರ, ಅದೆಷ್ಟು ನಿಶ್ಚಲ ಆಳ, ಅದೆಷ್ಟು ವೇಗ, ಅದೆಷ್ಟು ಅಸೀಮ, ಅಪಾರತೀರ, ಎಲ್ಲವೂ ಪ್ರಚೋದಿಸಿತು. ನನ್ನೊಳ ಆಳವನ್ನು ಕಂಪಿಸಿತು. ನನ್ನ ಸ್ಥಿರತೆಗೆ ಭಂಗ ತಂದಿತು. ಇಲ್ಲಿ ಅಳೆಯ ಬೇಕಾದುದು ಏನು? ಇಲ್ಲಿ ಮಥಿಸ ಬೇಕಾದುದು ಏನು? ಒಂದೂ ತಿಳಿಯದೇ, ಏನೋ ಪಡೆದಂತೆ, ಏನೋ ಕಳೆದುಕೊಂಡವನಂತೆ ನಿಮ್ಮಲ್ಲಿಗೆ ಬಂದಿರುವೆನು ಗುರುವರ್ಯ!” ಎಂದ ಶಿಷ್ಯ ಕಂಪಿಸುತ್ತ.
“ಶಿಷ್ಯಾ! ವನವನದಲ್ಲಿ ಇರುವ ಒಟ್ಟು ಸಸ್ಯ ಜೀವ ಚೇತನದ ಚೈತನ್ಯದ ಸಹಜತೆಯನ್ನು ಗುರುತಿಸು. ಅದನ್ನು ಸತ್ಯದಾಳದಲಿ ಅನುಭವಿಸು, ನಿನ್ನ ಮನದ ಆಂದೋಲನಕ್ಕೆ ಮೌನದ ದೃಷ್ಟಿಕೊಡು, ಅಲ್ಲಿ ಅರಳುತ್ತದೆ ನಿನ್ನ ಮನ. ಅದು ತೃಪ್ತಿ ಕೊಡುತ್ತದೆ ಮೌನದಲ್ಲಿ. ಇದು ಮನದ ಝುನ್ ಪ್ರಕೃತಿಯಿಂದ ಮನವು ಪಡೆವ ಮುಕ್ತತೆ. ಝುನ್ ಒಂದು ಒಟ್ಟಾರೆ ಜೀವನ ದರ್ಶನ. ಇದು ಪ್ರಕೃತಿಯ ಮುಚ್ಚು ಮರೆ ಇಲ್ಲದ ತೆರೆದಿಟ್ಟ ಸತ್ಯ. ಅದನ್ನು ಅರಿಯಲು ಶೂನ್ಯತೆಯ ಅರಿವು ಪಡೆದುಕೊಳ್ಳಬೇಕು. ಶೂನ್ಯತೆ ನಕಾರಾತ್ಮಕವಾದುದಲ್ಲ ಅದು ಸಕಾರಾತ್ಮಕ. ಎಲ್ಲವೂ ಒಂದು ಗೂಡುವಿಕೆ. ವನವನದಂತೆ ಕಾಡುಮೇಡಿನಂತೆ, ಸಕಲಜಲದ ಸಮಾವೇಶವಾದ ಸಮುದ್ರದಂತೆ, ಸಕಲಗ್ರಹ, ನಕ್ಷತ್ರ, ನಿಹಾರಿಕೆ ಸೂರ್ಯಚಂದ್ರಮರಿಂದ ಕೂಡಿದ ಆಕಾಶದಂತೆ. ಇಲ್ಲಿ ದ್ವಂದ್ವವಿಲ್ಲ. ಭಿನ್ನತೆಯಿಲ್ಲ. ಎಲ್ಲಾ ಎಲ್ಲವೂ ಒಂದಾಗುವಿಕೆ. ಯಾವುದರಿಂದಲೂ ಹೊರಹೋಗದಿರುವಿಕೆ, ಸರ್ವಸ್ವ ಗ್ರಹಣವೇ ಶೂನ್ಯತೆ. ಆಗ ಮನಕ್ಕೆ ಎಲ್ಲಿಯ ಗೊಂದಲ? ಎಲ್ಲಿಯ ಕಳವಳ?
ಈಗ ನಿನ್ನ ದಾರಿಗೆ ದೀಪ ನೀ ಹಚ್ಚಿಕೋ. ಅದು ನಿನ್ನದು. ನಿನ್ನ ಅನುಭವದ್ದು. ನಿನ್ನ ಮನಃಸ್ಫುರಣದ್ದು. ನಿನ್ನ ಪ್ರಜ್ಞೆಯ ಹೊಳಹು, ನಿನ್ನ ಕಣ್ಣಿನ ಮಿಂಚು. ನಿನ್ನ ಹೃದಯದ ಕೊನೆಯ ಅಂಚು! ಎಂಬ ಗುರುವಿನ ವಾಣಿ ಕೇಳುತ್ತಾ ಶಿಷ್ಯ ಝುನ್‌ನಲ್ಲಿ ಒಂದಾದವು.
*****

















