ದೇಗುಲದಿ ನಿನ್ನ ಶಿಲೆಯಮೂರುತಿಯ ಮುಂದೆ
ಬಾರಿಸುವ ಜೇಗಟೆಯದನಿಗೆ ದೇವ!
ಮರೆತು ನಿದ್ದೆಯಮಾಡುತಿಹ ಎನ್ನ ಹೃದಯದಲಿ
ಅರಿವಿಲ್ಲ! ಎಚ್ಚರಿಸು ಪರಮಾತ್ಮನೆ! ೧
ಕಂದದಯೆ ಕುಂದದೆಯೆ ನಿನ್ನ ಬಿಂಬದ ಮುಂದೆ
ನಿಂದು ಉರಿಯುತಿಹ ನಂದಾದೀಪವು
ಹರಿಸಲಾರದೆದೆಯಲಿಹ ಗಾಢಾಂಧತೆಯ
ತೋರು ನೀಂ ಜ್ಞಾನಜೋತಿಯನು ದೇವ! ೨
ಹೊಳೆಯುತಿಹ ನಿನ್ನ ವಿಗ್ರಹದ ಮುಂಗಡೆಯಲ್ಲಿ
ಬೆಳಗುತಿಹೆ ಕಪ್ಪುರಾರತಿಯು ಮತ್ತೆ
ಘಮಘಮಿಪ ಧೂಪಧೂಮದ ಕಂಪು ಎನ್ನೆದೆಯ
ಕಲುಷಿತವ ಹರಿಸಲಳವಲ್ಲ ದೇವ! ೩
ಪಂಡಿತರು ಘೋಷಿಸುವ ವೇದಮಂತ್ರಗಳೆಲ್ಲ
ಮಂದಮತಿಯಾದೆನಗೆ ನಿಲುಕಲಾರ
ವೆಂದೆನ್ನೆದೆಯ ಒಳದನಿಯು ನುಡಿಯುತಿದೆ ದೇವ!
ಮನದ ಬಂಧನ ಹರಿಸು ಗುರುದೇವನೆ! ೪
ಬಾರಿಸುವ ಜೇಗಟೆಯು ಉರಿವ ನಂದಾದೀಪ
ಬೆಳಗುತಿಹ ಕಪ್ಪುರಾರತಿಯು ಮತ್ತೆ
ಧೂಪಧೂಮದ ಕಂಪು ಪಂಡಿತರ ಮಂತ್ರಗಳು
ಬರಿಯ ಬಯಲಾಟದಂತಿಹವು ದೇವ! ೫
ತಿಳಿನೀರಕೊಳದ ಮೇಗಡೆಯಲ್ಲಿ ಮುಸುಕಿರುವ
ಶೈಲೂಷವನು ಕಲ್ಲೆಸೆದು ಹರಿಸು
ವಂತೆನ್ನ ಹೃದಯ ಕಾಸಾರ ಕಲುಷಹಿತವ ಹರಿ
ಸಲಾರದು ನಾನೆಸಗುತಿಹ ಕರ್ಮವು ೬
ಕರ್ಮವೆಂತೆಸಗಿದರು ಫಲವೇನು? ಗುರುದೇವ!
ಮರ್ಮವರಿಯದೆ ತೊಳಲುವೆನೆಲ್ಲೆಲ್ಲು!
ಜ್ಞಾನದಾಹದಿ ಬಳಲಿರುವ ಎನಗೆ ನಿಜತತ್ವ
ಪೀಯೂಷಪಾನವನು ನೀಡು ದೇವ! ೭
ಕಾನನದ ಮಧ್ಯದಲಿ ಕಾರಿರುಳ ಕೊನೆಯಲ್ಲಿ
ಅರಳುತಿಹ ಸುಮದಂತೆ ಅರಳಿಸೆನ್ನ
ಒಳಗಣ್ಣ ಹೂವನು ಕಾರುಣ್ಯ ಮೂರುತಿಯೆ!
ಬಗೆಹರಿಸು ಮನದ ತೊಡಕನ್ನು ದೇವ! ೮
*****

















