
ಚಿಮ್ಮುತ ನಿರಿಯನು ಬನದಲಿ ಬಂದಳು
ಬಿಂಕದ ಸಿಂಗಾರಿ;
ಹೊಮ್ಮಿದ ಹಸುರಲಿ ಮೆರೆಯಿತು ಹಕ್ಕಿ
ಕೊರಲಿನ ದನಿದೋರಿ.
ಹೇಳೆಲೆ ಹಕ್ಕಿ, ಚೆಲುವನು ಸಿಕ್ಕಿ,
ನನಗೆ ಮದುವೆಯೆಂದು?
ಆಳಿಬ್ಬಿಬ್ಬರು ಕೇರಿಯ ಸುತ್ತಿ,
ಹೆಗಲಲಿ ಹೊತ್ತಂದು!
ಹಕ್ಕಿಯೇ ಹೇಳೈ, ಒಸಗೆಯ ಮಂಚವ
ಸಿಂಗರಿಸುವರಾರು?
ಸೊಕ್ಕಿನ ಹೆಣ್ಣೇ, ಮಣ್ಣಲಿ ಕುಳಿಯನು
ಆಳದಿ ತೆಗೆಯುವರು.
ಅಡವಿಯ ಮುಳ್ಳಲಿ ಮಿಂಚಿನ ಹುಳುಗಳು
ಪಂಜನು ಹಿಡಿಯುವುವು.
ಗಿಡಗಳ ಹೊಳ್ಳಿನ ಗೂಬೆಗಳೆಲ್ಲಾ
ಬಾ ಹಸೆಗೆನ್ನುವುವು!
*****
SCOTT(1771-1832) : Proud Maisie














