ಕೇಳಲಾರೆ ಕಣೆ ದೀಪಿಕಾ ನಿಲ್ಲಿಸೆ ಈ ಬಡಾಯಿ, ಡೌಲು
ನಾ ಕಾಣದ್ದೇನೇ ನೀ ಕುಟ್ಬುವ ಈ ಜಂಬದ ಡೋಲು?
ಗಂಡಿನ ಹಂಗಿಲ್ಲದೆ ಬಾಳುತ್ತೀಯಾ? ಲೇ ಹುಡುಗಿ!
ತೇಲುವ ಬೆಂಡಾಗುತ್ತದೆಯೆ, ಬಾಗಿದ ಜೊಂಡಾಗುತ್ತದೆಯೆ
ನಿಂತ ನೆಲವನ್ನೆ ಕೊರೆದು
ಗರಗರ ಬುಗುರಿ ತಿರುಗಿ ಹೋಗುತ್ತದೆಯೆ ಬದುಕು!
ಕೀಲು ಹಾಕದ ಚಕ್ರ ಹೊರಳದೆ ಇರುತ್ತದ?
ಕೆರಳದೆ ಇರುತ್ತದೇನೇ
ಸರಳ ನಡುವೆ ಹಸಿದು ಸುತ್ತುವ ತೋಳದ ಹಿಂಡು?
ಅಲ್ಲವೆ, ಪಾಳೆಯದಲ್ಲೇ ದಂಗೆ ಎದ್ದು ಗುಲ್ಲಾಗಿದೆ
ದಡಗಳ ತಡೆಗಳ ದಾಟಿ ಹೊಲಕ್ಕೆ ಮದಜಲ ನುಗ್ಗಿದೆ
ಆದರು ಕೋಟೆಯ ಹೊರಗೆ
ಸಿಪಾಯಿ ಭಂಗಿಯ ಶಿಸ್ತಿನ ಅಂಗಿಯ ಸಂಗತಿಯೇನೇ?
ಹೇಳೇ ದೀಪಿಕಾ
ಎಣ್ಣೆ ಇರುವಾಗ ಉರಿಯದೆ ಕಣ್ಣು ಮುಚ್ಚುವುದೇನೇ?

ಈ ಶಿಸ್ತಿನ ನಾಟಕ ಹೀಗೇ ಸಾಗಿರುವಾಗಲೆ
ಭರತವಾಕ್ಯಕ್ಕೆ ಇನ್ನೂ ಹೊತ್ತಿರುವಾಗಲೆ
ಕಾಡು ಕರೆಯುತ್ತದೆ ಹಾಡು ಮುಗಿಯುತ್ತದೆ,
ಎಣ್ಣೆಯೆಲ್ಲ ಒಣಗಿ ಹಣತೆ
ಮಣ್ಣ ಹೊಳಕೆಯಾಗುತ್ತದೆ;
ನಿನ್ನೆ ಮೈಯಲ್ಲಿ ಚೈತ್ರ ಬಿಚ್ಚಿರುವ ಚಿಗುರನ್ನು ಹಚ್ಚಿರುವ ಅಗರನ್ನು
ಮಂಜುನಾಲಿಗೆಯೊಂದು ನೆಕ್ಕಿ ಚಪ್ಪರಿಸಿ ಬಿಡುತ್ತದೆ;
ನೀ ಮುಟ್ಟಿದ್ದನ್ನು ಮುತ್ತಿಡುತ್ತ
ಮೆಟ್ಟಿದಲ್ಲಿ ಮಣ್ಣು ಮುಕ್ಕುತ್ತ
ಬೆನ್ನುಬಿದ್ದು ಅಲೆದ ಊರು
ಗುಡ್‌ಬೈ ಕೂಗಿ ಓಡುತ್ತದೆ.

ಅಮೇಲೆ
ಅಜ್ಜಿಯರ ಬಳಗ ಕರೆಯುತ್ತದೆ ನಿನ್ನನ್ನ
ಪುಣ್ಯಕಥೆ ಕೇಳುವುದಕ್ಕೆ ಪುರಾಣದ ಕಟ್ಟೆಗೆ
ಹತ್ತಿ ಬಿಡಿಸುವುದಕ್ಕೆ ಬತ್ತಿ ಹೊಸೆಯುವುದಕ್ಕೆ;
ಕಣ್ವರು ಸಾಕಿದ ಕನ್ಯೆ
ಕಣ್ಣು ಹೊರಳಿದ್ದ ವೇಳೆ
ಭೂಪನೊಬ್ಬನ ಮೈ ಬೆಂಕಿಗೆ ಧೂಪಹಾಕಿದ್ದ ಕೇಳುವುದಕ್ಕೆ:
ಬೆಣ್ಣೆ ಹಾಲು ಹೊತ್ತು ನೆರೆದ ಕನ್ಯೆಗೋಪಿಯರ ನಡುವಿನಲ್ಲಿ
ಬೃಂದಾವನದ ಭಗವಂತ ಮೆರೆದ
ಶೃಂಗಾರದಲ್ಲಿ ಕಿವಿತೊಳೆಯುವುದಕ್ಕೆ!

ಕೇಳುತ್ತ ಕೇಳುತ್ತ ಕಣ್ಣೀರು ಕರೆಯುತ್ತೀಯ
ದೇವರೇ ಗೆಜ್ಜೆಕಟ್ಟಿ ಕುಣಿದರೂ
ನಾನು ಹೆಜ್ಜೆಹಾಕದೆ ಹೋದೆನೆ ಅಂತ;
ಅಟ್ಟಮೇಲೆ ವ್ಯರ್ಥವಾಗಿ ಉರಿಯುತ್ತೀಯ
ಮಡಿಲಲ್ಲೇ ಹಾಲು ಹಣ್ಣಿದ್ದೂ
ಬಡಿವಾರಕ್ಕೆ ಉಪವಾಸ ಬಿದ್ದೆನೆ ಅಂತ;
ಕಟ್ಟದ ಮಾಲೆ ಯಾರೂ ಮುಟ್ಟದೆ ಬಾಡಿತೆ ದೇವರೆ
ಪಲ್ಲವಿ ತಾನಗಳಿಲ್ಲದೆ ಪವಮಾನಕ್ಕೆ ಬಂದೆನೆ ಅಂತ;
ಅದರೆ ದೀಪಿಕಾ ಅಗ
ತಿದ್ದಲು ಏನಿರುತ್ತದೆ?
ಡೋಲು ಹರಿದಿರುತ್ತದೆ, ಕೋಲು ಮುರಿದಿರುತ್ತದೆ
ಉಪ್ಪು ಮುಕ್ಕಿದ ಸೊಕ್ಕು ನೀರು ಕುಡಿಯುತ್ತಿರುತ್ತದೆ.
*****
ದೀಪಿಕಾ ಕವನಗುಚ್ಛ