ರಾತ್ರಿ ಕತ್ತಲೆಮನೆ ನೋವಲ್ಲಿ
ಕನಸುಗಳು ಅಡರಿಸಿ ಬೆಳಂ
ಬೆಳಕಿನ ಸೂರ್ಯನಿಗೆ ನೂರು
ಪ್ರಶ್ನೆಗಳನ್ನು ಒಡ್ಡುತ್ತವೆ. ಬಚ್ಚಿಟ್ಟ
ಬೆತ್ತಲ ಬದುಕು ಮತ್ತೆ ತಲ್ಲಣ
ಗಳೊಂದಿಗೆ ಹೊಸ ಬೆಳಗು ಹುಟ್ಟುತ್ತವೆ.

ಹುಟ್ಟುವ ಕ್ರಿಯೆ ಇಲ್ಲದಿದ್ದರೆ ಈ
ಜಗತ್ತು ನಾನು ನೀನು ಕವಿತೆ ಹೇಗೆ
ಮಿರುಗಿ ಕೊರಗಿ ಬಡಿದಾಡಿ ಹೂ ಬಳ್ಳಿ
ಚಿಗುರು ಹಮ್ಮುಬಿಮ್ಮು ಒಡಲಿಗೆ
ಹಸಿಯನ್ನು ಸುರಿಯುತ್ತವೆ ಮತ್ತೆ
ಅದ್ಭುತ ಜೀವಗಳು ಚಿಗುರುತ್ತವೆ.

ಹೀಗೆ ಚಿಗುರು ಚಿಮ್ಮಿ ವಿಸ್ಮಯ
ವಿನೀತಗೊಂಡ ಕವಿತೆಗಳು ಮಂಪರು
ಹರವಿಕೊಂಡು ಬಾಚಿತಬ್ಬುವ ತಳಮಳ
ಹನಿಗಳು ಮುತ್ತಾಗಿ ಒಡಲ ಕಡಲ
ಸೇರಿ ನಿರಂತರ ಅಲೆಗಳ ನದಿಯ ಮೌನ
ಧ್ಯಾನಿಸುತ ಮಳೆ ಮೋಡ ಬೀಜ ಕಟ್ಟುತ್ತವೆ.

ದೀರ್ಘಕಾಲ ಅರಳಿ ಬಂದ ಪ್ರೀತಿ
ಮಳೆ ಹುಡುಕಾಟ ಲೋಕ ದಾಸೋಹ
ಮನೆ ಅಂಗಳದಲ್ಲಿ ಆಕಾಶ ಬುಟ್ಟಿ
ಬೊಗಸೆ ತುಂಬ ಹರಿದ ನೀರು
ಗೂಡು ಮಾಡಿದ ಜೀವ ಜಲ
ಹಣತೆಯ ತುಂಬ ಬೆಳಕಿನ ಹಕ್ಕಿ ಹಾಡು.
*****