ಉರುಳಿ ಅರಿವಿನ ಮೋರಿಯಲ್ಲಿ
ನರಳುತ್ತಿರುವೆ
ಇಲ್ಲಿ ನೆಮ್ಮದಿ ಎಲ್ಲಿ ?
ಕೊಳೆತು ನಾರುತ್ತಿರುದ ಹಳೆಯ ಭೂತ ;
ಅದರ ಮೇಲೇ ಮೊಳೆತ ಹೊಸ ಕನಸುಗಳ ತುಡಿತ,
ಎರಡು ಗಡಿಗಳ ನಡುವೆ
ಒಡೆದು ಬಿದ್ದಿದೆ ರೂಪ.
ಹೊಕ್ಕುಳಿನ ಹುರಿ ಕಡಿದು
ಹಳಿ ಬಿಟ್ಟು ಹೊರನಡೆದು
ಪ್ರತ್ಯೇಕತೆಯ ಸುಳ್ಳ ಕೋಟಿ ಕೊರಳುಗಳಲ್ಲಿ
ಕೂಗಿ ದಣಿದಿದೆ ಪಾಪ

ಚಿತ್ತ ಹೊತ್ತ ಮನುಷ್ಯ
ಚಿತ್ತವಿಲ್ಲದ ನೆಲ,
ಬೆಟ್ಟ ಮರ ಗಿಡ ಕಲ್ಲು,
ಹುಲ್ಲು ಪರಿಮಳ ಜಲ ;
ಯಾರು ಉತ್ತಮ, ಯಾರು ಅಧಮ, ಏತಕೆ, ಹೇಗೆ ?
ಯಾರು ಪಡೆಯುತ್ತಾರೆ ಯಾರಿಂದ, ಏತಕ್ಕೆ ?
ಹೇಗೆ ದುಡಿಸುತ್ತಾರೆ, ದುಡಿಸಿ ಗುಡಿಸುತ್ತಾರೆ
ಯಾರು ಯಾರನ್ನೇಕೆ ಜೀತಕ್ಕೆ ?

ಯೋಚಿಸಬರದ ಅಶೋಕ
ಋತು ತಪ್ಪದೆ ಸುರಿವ ಚಿಗುರು,
ಯೋಚಿಸಲಾಗದ ಆಲದ ಅರ್ಧ ಎಕರೆ ನೆರಳು
ಯೋಚಿಸಲಾಗದ ಮಾವು,
ಆಲೋಚಿಸಲಾಗದ ಹೂವು,
ಯೋಚಿಸುವ ಮನುಷ್ಯನನ್ನೇ
ಸಾಕುವ ಪರಿಯನ್ನು
ಆಲೋಚಿಸಬೇಕು ನಾವು

ಚಿತ್ತವೇ ಶತ್ರುವೇ ನಮಗೆ ? ಸೃಷ್ಟಿಯ ಹಡೆದ
ಮೂಲಕ್ಕೆ ಮಿಥ್ಯವೇ ?
ಅದಕ್ಕೂ ಮೀರಿದ ಶಕ್ತಿ ಜಡಕ್ಕೆ ಸಲೀಸು ದಕ್ಕಿ
ಸತ್ಯ ಪ್ರತ್ಯಕ್ಷವೆ ಅದಕ್ಕೆ ?
ಕಡಿಸಿಕೊಳ್ಳುವ ನೋವು ಕಡಿಯುವ ಜೀವಕ್ಕಿರದ
ಸ್ಥಿತಿ ಮರ್ತ್ಯಮಾತ್ರವೆ ?
ಮೂಲಪ್ರಜ್ಞೆಯ ಬಿಂಬ
ಕೋಟಿ ಚೂರುಗಳಾಗಿ
ಹಿರಿಕಡಲು ಹನಿಹನಿಗಳಾಗಿ ಒಡೆದ ವಿಕಾರ
ಗುರುತಿಸಿದರೂ ನಿಜವ ರುಚಿಯಲ್ಲಿ, ಹನಿಗೆಲ್ಲಿ
ಹಡಗುಗಳ ತೇಲಿಸುವ ಅಧಿಕಾರ ?
*****