ಹಠಾತ್ತಾಗಿ ಬಂದ ಚಡಪಡಿಕೆ
ಅದ್ಹೇಕೋ ನಿನ್ನ ಪಾದಗಳು
ಒಮ್ಮೆಲೆ ನೆನಪಾದವು
ಪಾದಗಳ ಬಳಿ ಕುಳಿತು
ಸರಿರಾತ್ರಿ ಧ್ಯಾನಿಸಿದ ನೆನಪು

ಇಡೀ ದೇಹವನ್ನು ಉಂಡ ಮೇಲೆ
ಉಳಿದದ್ದೇನು??
ತೃಪ್ತಿಯಿಂದ ಅಪ್ಪಿ ಮಲಗುವುದಷ್ಟೇ
ಕನಸು ನನಸು ಬೀಜ ಮೊರೆತದ
ಜೀವ ಮಿಡಿತದ ಸದ್ದು
ಕಿವಿಗೆ ಮಾತಾಡಿ ತೆರಳಿತು

ಪಾದಗಳ ಬಳಿ ಕುಳಿತು ಧ್ಯಾನಿಸಿದೆ
ಮಗು ಪುಟ್ಟು ಕಾಲುಗಳಿಂದ
ಹಿತವಾಗಿ ಮುಖಕ್ಕೆ ಒದೆಯುತ್ತಿತ್ತು ಕಿಲಕಿಲ
ನಗುತ್ತಿತ್ತು ,ಭೂಮಿ ಮಳೆಮಿಂದು ನಕ್ಕಂತೆ

ಮಗು ತನ್ನ ಮುಖದಲ್ಲಿ
ನನಗೆ ಕನ್ನಡಿ ಹಿಡಿದಿತ್ತು
ಪಾದಗಳ‌ ಬಳಿ ಕುಳಿತು ಶರಣಾದೆ

ಬೆಳಗೊಳದ ಬಾಹುಬಲಿ
ಕಲ್ಲಾಗಿ ಆಕಾಶದೆತ್ತರಕೆ ಬೆಳೆದಿದ್ದ
ಅವನ ಪಾದಗಳ ಬಳಿ ನಿಂತೆ
ಕುಳಿತೆ ಧ್ಯಾನಿಸಿದೆ ಮಲಗಿದೆ

ಆಗಲೂ ನೆನಪಾದದ್ದು
ನೀನು, ಮಗುವಿನ ಒದೆತ ತಿವಿತ
ಪಾದಗಳ ಬಳಿ ಕುಳಿತು ಧ್ಯಾನಿಸುವುದೆಂದರೆ
ಅದು ಸಾಮಾನ್ಯವೇನಲ್ಲ??

ಭೂಮಿ ತಾಯಿಯ ಬಳಿ ಬಂದೆ
ಹೊಲದಲ್ಲಿ ಮಲಗಿದೆ, ಸ್ವಲ್ಪ ಹೊತ್ತು ನಡೆದೆ…
ಕೈಗಳಿಂದ ಮಣ್ಣ ಸ್ಪರ್ಶಿಸಿದೆ
ಮಣ್ಣಲ್ಲಿ ಆಕೆಯ ಪಾದಗಳು ಸಿಕ್ಕವು
ಅಲ್ಲೇ ಆಕೆಯ ಧ್ವನಿ ಇತ್ತು
ಬದುಕಿತ್ತು ಒಡಲಿತ್ತು
ದಶಕಗಳ ನಂತರ ಹೊಲದ ಮುಖ ನೋಡಿದೆ
ಬಾಲ್ಯ ಮರುಕಳಿಸಿತು
ಇದೇ ಹೊಲದಲ್ಲಿ ಎತ್ತುಗಳು ದುಡಿದಿದ್ದವು, ಅಪ್ಪನ ಬೆವರಿತ್ತು ನಗುವಿತ್ತು ಹೂವಂತ ಮಾತಿತ್ತು

ಇದೇ ಹೊಲದಲ್ಲಿ ಬೆಳೆದ ನವಣೆ ಜೋಳದ ತೆನೆಯ ಜೊತೆ ಆಟವಾಡಿ, ಹಣ್ಣು ತಿಂದು ನಕ್ಕಿದ್ದೆವು ಹಸಿಗಡಲೆ ಸುಟ್ಟು ಮುಕ್ಕಿದ್ದೆವು

ಹೊಲದ ಪಾದಗಳ ಬಳಿ ಕುಳಿತು ಧ್ಯಾನಿಸುವುದೆಂದರೆ
ಹುಡುಗಾಟವಲ್ಲ
ಕಳೆದು ಹೋದ ತಾಯಿ, ಯೌವ್ವನದ ಪ್ರೇಯಸಿಯ ಜೊತೆ
ನಕ್ಕಂತೆ ಬಿಕ್ಕಿದಂತೆ
ಮತ್ತೆ ನಕ್ಕು ಜಾತ್ರೆ ಮುಗಿಸಿ
ಮರಳಿ ಬದುಕಿಗೆ ನಡೆದಂತೆ…
*****