ಕಾದ ಬಿಸಿಲಿನ ಝಳದಲಿ
ಅವಳು ಬೆವರ ಹನಿಗಳು
ಹೊತ್ತು ಸಾಗಿದ್ದಾಳೆ ಆಯಾಸದಲಿ
ಹೊರೆಯಲಿ ಆ ದಿನದ ಒಲೆಯ ಕಾವಿದೆ.

ಆಡದ ಮಾತುಗಳು ನೂರಿವೆ
ತೋರಗೊಡುವದಿಲ್ಲ ಅವಳು
ಮುಖದ ನೆರಿಗೆಗಳಲಿ ಮಿಡಿದ
ಯಾರೇನು ಮಾಡಲಾಗದ ಭಾವ ಕಂದೀಲಿನಲಿ.

ಹೊರುವದೆಲ್ಲವ ಹೊರಬೇಕು
ಗುಡಿಸಲ ಮಧ್ಯೆದಲಿ ಮಕ್ಕಳ ಗುಂಪು
ತಾನಾಗಿ ಬಂದ ಹಗಲಿನ ಹಸಿವು
ರಾತ್ರಿ ಹಿಂಗುತ್ತದೆ ಸೂರ್ಯ ಮುಖ ಮರೆಯಿಸಿದ್ದಾನೆ.

ಅವಳ ಕೂಗು ಯಾರಿಗೂ ಕೇಳಿಸುವದಿಲ್ಲ.
ಹೊರಗೆ ಬರೀ ಗೌಜು ಗದ್ದಲ
ಮೇಜು ಕುಟ್ಟುವವರಿಗೆ ತನಗಾದ್ದು ಮಾತ್ರ
ಕೇಳಿಸುತ್ತದೆ ದೂರುಗಳಿಲ್ಲದೇ ಅವಳು ಸರಿದು ಹೋಗಿದ್ದಾಳೆ.

ಆಡಿದರೆ ಒಂದೂ ಮಾತು ಧ್ವನಿಯಾಗುವದಿಲ್ಲ
ಆಡದೇ ಉಳಿದರೆ ಎದೆ ಸುಡುವ ದಾಹ
ಮೌನ ಕಡೆಯ ಮಾತೆಂದು ಸುಮ್ಮನಾಗಿ
ಇನ್ನೊಮ್ಮೆ ಹೇಳಿದರಾಯ್ತು ಎಂದು ನಡೆದಿದ್ದಾಳೆ ಅವಳು.
*****

ಕಸ್ತೂರಿ ಬಾಯರಿ
Latest posts by ಕಸ್ತೂರಿ ಬಾಯರಿ (see all)