Lata Gutti

ಓಂ

ನಮ್ಮೊಳಗಿನ ಸಮುದ್ರ ಮೊದಲು ಸಾಯಬೇಕು ಶಾಂತವಾದಾಗ ಹುಟ್ಟುತ್ತದೆ ಅಲ್ಲೊಂದು ಶುಭ್ರಕಮಲ ಮೃದುವಾಗುತ್ತದೆ ಮನಸ್ಸು. *****

ಭ್ರೂಣಬಲಿ

ಗಾಳಿ ಬೆಳಕಿನ ಸೋಂಕಿಗಿಂತ ಮೊದಲೇ ಎರಡು ನಾಲ್ಕಾಗಿ ನಾಲ್ಕು ಎಂಟಾಗಿ ಟಿಸಿಲೊಡೆಯುವ ಭ್ರೂಣಕ್ಕೆ ಏಡ್ಸ್ ಸೋಂಕಿ ಚಿಗುರೇ ಮುಟುರಿಕೊಂಡಿತ್ತು. *****

ಸಂಕೋಲೆಯೊಳಗಿಂದ

ಅಪ್ಸರೆಗಳಿಗೆ ಅಪ್ಪ ಸೆರೆಯಾದ ಗೆಳತಿ ದುಃಖಿಸಿದಳು ಅಳಬೇಡ ಮಗಳೆ ನನ್ನ ಸೆರೆ ಬಿಟ್ಟದ್ದು ಒಳ್ಳೆಯದೇ ಸೆರೆವಾಸಕ್ಕಿಂತ ಸರಳವಾಸಕ್ಕೆ ಹಾದಿ ಮಾಡಿಕೊಟ್ಟಿದ್ದಾನೆ – ಗೆಳತಿ ಕಕ್ಕಾಬಿಕ್ಕಿಯಾದಳು. *****

ಆತ್ಮಹತ್ಯೆ

ನಾನು ಕಾಯ್ದೆ ಬರಲಿಲ್ಲ ಅವಳು ನಾನೇ ಹೋದೆ ಕರೆಯಲಿಲ್ಲ ಒಳಗವಳು ಕರೆದರವರು ತೋರಿಸಿದರವರು ಹೇಳಿದರವರು ಮುಖ ಮುಚ್ಚಿದರು ಈಗವಳಿಗೆ ೩ ತಿಂಗಳಾಗಿತ್ತಂತೆ. *****

ನೆಪ

ಮಸಾಲೆ ದೋಸೆ ಬೇಕೆಂದಾಗೆಲ್ಲಾ ಏನಾದರೂ ನೆಪ ಹೇಳಿ ಗಂಡನೊಂದಿಗೆ ಮುನಿಸಿಕೊಳ್ಳುವದು ಅವನ ಪ್ರೀತಿ ಬೇಕೆಂದಾಗೆಲ್ಲ ಅವನಿಷ್ಟದ ಅಡುಗೆ ಮಾಡುವದು. *****

ಮ್ಯಾಚಿಂಗ್

ಮಾನಸಿಕವಾಗಿ ಗಂಡ ಮ್ಯಾಚಿಂಗ್ ಆಗದೇ ಇದ್ದರೂ…. ಒಳಗೊಳಗೆ ತೊಳಲಾಡಿದರೂ…. ಚಿತ್ತಾರದ ಮಾಂಗಲ್ಯ ಮ್ಯಾಚಿಂಗ್ ಕುಂಕುಮ ಬೇಕು ಫ್ಯಾನ್ಸಿ ಯುವತಿಯರಿಗೆ *****