ಋಷಿ ಮುನಿಗಳ ಪುಣ್ಯಧಾಮಗಳಲಿ ಸುತ್ತಿ
ಗಂಗಾ ಯಮುನಾ ಸರಸ್ವತಿಯರ ಪಾವಣಿಗಳಲಿ ಮುಳುಗಿ
ಗಳಿಸಿದ ಲಾಭಗಳೇನೇನು ಗೆಳತಿ “ಭಾರತಿ”?
ಹೊರಟಿಹೆ ಗಬ್ಬೆದ್ದ ದೇಹ ಮನಸು
ಶುಚಿಗೊಳಿಸಲು ನಿಮ್ಮ ಗಿರಿ ಧಾಮಗಳಿಗೆ-
ಬಿಳಿಯಳ ಪ್ರಶ್ನೆಗೆ ತಬ್ಬಿಬ್ಬು.
ಪಾಪ ಪ್ರಜ್ಞೆ ಕಾಡಿ ಪ್ರಾಯಶ್ಚಿತ ಬಯಸಿ
ಹೊರಟಿರುವ ಜೋಲು ಮುಖದ
ಕ್ಯಾಮಲೀನಾ ಮೌನಿ
ಮನದೊಳಗೆ ನೂರಾರು ಪ್ರಶ್ನೆಗಳ ಮೂಕಿ.
ಗಂಗೆಯ ಪಾದಕೆ ತಲೆಬಾಗಿಸಿ
ಪುಣ್ಯಭೂಮಿಯ ಮಣ್ಣು ಸ್ಪರ್ಶಿಸಿ
ಧನ್ಯತೆಯ ಭಾವ ಬಯಕೆಯ ಕನಸಿಗೆ
ಸಮಾಧಾನದ ನಾಲ್ಕು ಮಾತು ಮುತ್ತಾಯಿತವಳಿಗೆ
ಕಣ್ತುಂಬಿದ ನೀರು
ಆತ್ಮಶುದ್ದೀಕರಣದ ಮೊದಲು ಮೆಟ್ಟಿಲು
ಒಳಗೊಳಗೇ ವ್ಯಥೆ
ಆ ರಾಡಿಮಣ್ಣು ಈ ನೀರಿನಲಿ ತೊಳೆಸುವದಾ?
ಅಪವಿತ್ರ ಪವಿತ್ರ
ಪವಿತ್ರ ಅಪವಿತ್ರ-ಪವಿತ್ರ.
ಸುಳಿಸುಳಿಯೊಳಗೆ ಹರಿದಾಡಿ ಹೊರಳಾಡಿ
ಅಪ್ಪಿ ಸ್ಪರ್ಶಿಸಿ ಬಂದವರಿಗೆ
ರಮಿಸಿ ಕೈಹಿಡಿವ ಪಾವಣಿ ದಯಾಮಯಿ
ದಿಲ್ಲಿ ನೆಲಕ್ಕಿಳಿದು ಬಿಳ್ಕೊಂಡ
ಕ್ಯಾಮಿಲಾಳ ಬಿಗಿಯಪ್ಪುಗೆ
ಮನದೊಳಗೆ ಆರ್ಧ್ರತೆ.
*****


















