ಇದ್ದಕ್ಕಿದ್ದಂತೆ ಗಡಗಡ ಸದ್ದು ಹೊಯ್ದಾಟ
ಇಣುಕಿದರೆ ಕಿಡಿಕಿಯಿಂದ
ಕಗ್ಗತ್ತಲು ಭಯಾನಕ
ಭೂಮಿ ಆಕಾಶಗಳೆಲ್ಲೋ-
ಕಂಪನಿ ನಾಟಕದ ಕಪ್ಪು ತೆರೆಯಿಳಿದು
ಲೈಟ್ ಮ್ಯೂಸಿಕ್ ಬ್ಯಾಂಡಿನವರೆಲ್ಲಾ ತಣ್ಣಗೆ
ಡೈರೆಕ್ಟರ ಸೂರ್ಯ ಕ್ಯಾಶ್ ಎಣಿಸಿ
ಜಾಗ ಖಾಲಿ ಮಾಡಿ ಎಲ್ಲೋ ಕುಡಿದ ಮಂಪರು
ಸಮುದ್ರವೊ ಮರುಭೂಮಿಯೋ
ಮಿಣಿಮಿಣಿ ದೀಪಗಳು ಅಲ್ಲಲ್ಲಿ
ಹಡಗಿನವರಿದ್ದರೆ ತೆರಳುತಿರಬಹುದು
ಮನೆಗೊ ವ್ಯಾಪಾರಕೊ
ಮರುಭೂಮಿ ಇದ್ದರೆ
ಬಾವಿ ತೋಡುತ್ತಿರಬಹುದು ಪೆಟ್ರೋಲಿಗೆ…
ಕ್ಷಣಾರ್ಧದಲಿ ಮರೆಯಾಗಿ ಕಸಿವಿಸಿ
ಕಪ್ಪುಮೋಡಗಳ ಗ್ರಹಣ ಮತ್ತೆ ಮಿಣಿಮಿಣಿ
ರಾತ್ರಿ ಪಯಣಿಗ ಗುಮ್ಮನೆಯ ಕತ್ತಲು ಸೀಳಿ
ಹಾರ್ನ ಸದ್ದಿಲ್ಲ ಕಾಲುಗಾಲಿಗಳಿಲ್ಲ
ಹಾರುತಿದೆ ಓಡುತಿದೆ
ರಸ್ತೆಯೇ ಇಲ್ಲದ ವಿಶಾಲ ರಸ್ತೆಯಲಿ
ಪಂಚತಂತ್ರದ ಈ ಪಕ್ಷಿ
ಇಳಿಯಿತು ಇಳಿಯಿತು ಸೂರ್ಯನ ಅಮಲು
ಕಪ್ಪು ತೆರೆಸರಿದು
ಎಳೆ ಬೂದು ಹಳದಿ ನೀಲಿತೆರೆ
ದಾಟುತ ಶುಭ್ರಾವತಾರಕೆ ಅಣಿಯಾಗುತಿದೆ ಬೆಳಗು
ಬ್ರಾಹ್ಮಿ ಮುಹೂರ್ತ
ಚುಮುಚುಮು ನಸುಕು
ಯಂತ್ರಪಕ್ಷಿ ನೆಲತಬ್ಬುತಿರಲು
ಕುದುರೆಯ ಕೆನೆತದ ರಥವೇರಿ
ಸೂರ್ಯ ನಾಟಕವಾಡಿಸಲು ಹೊರಟ.
*****


















