ದೀಪ ಹಚ್ಚುವ ಈ ಕತ್ತಲಲ್ಲಿ
ಮೂಲೆ ಮನೆಯಿಂದ ಪಾರಿಜಾತ ಗಂಧ
ಬಗಲು ಮನೆಯಿಂದ ಸಂಪಿಗೆ ಸುಗಂಧ
ಗಾಳಿಗೆ ಹರಿದು ಎದೆ ಆಳಕೆ ಇಳಿದ ಪಂಚಮಿ ಜೋಕಾಲಿ

ಕವಿತೆಗಳ ಬೆಚ್ಚಗೆ ಹೊಂಗಿರಣಗಳ ಸಾಲು
ಹಿಡಿದು ಹೂಮಾಲೆಯಗುಂಟ ಸಾಗಿ ಕೆತ್ತಿದ
ಕನಸುಗಳ ಮೂರ್ತಿಯಿಂದ ಅವನ ಬಿಂಬ
ಕಣ್ಣ ರೆಪ್ಪೆಯಲ್ಲಿ ಪ್ರತಿಬಿಂಬ ಬಣ್ಣದ ಗಣಪನ ಸಾಲು.

ಮಬ್ಬು ಹರಿದ ಕಬ್ಬಿಣ ಇಬ್ಬನಿ ಸಾಲಿನಲ್ಲಿ
ರೆಕ್ಕೆ ಬಡಿದುಕೊಂಡ ಬೆಳ್ಳಕ್ಕಿ ಹಿಂಡು ಹಾರಿ ಹಾರಿ
ನೀಲ ಬಾನತುಂಬ ಗಾಳಿಪಟವಾಗಿ ಇರುಳಿನ
ಜಾಗರಣೆಯಲ್ಲಿ ಉಲ್ಲಾಸ ಸಡಗರದ ದೀಪಾವಳಿಯ ದೀಪಗಳು.

ಹನಿ ಹನಿ ಹಾಸುಬಿಸಿನ ದಿಗಂತ
ಪ್ರೇಮ ಕಾವ್ಯ ನದಿ ಹರಿದು
ಬಯಲತುಂಬ ಹಸಿರು ಪಲ್ಲಕ್ಕಿ ಸಸಿ ಮೂಡಿದ ಗರ್ಭದಲ್ಲಿ
ನವಮಾಸದ ಸಂಭ್ರಮ ಅರಳಿದ ನವರಾತ್ರಿ ನೃತ್ಯ.

ಬೆಳದಿಂಗಳ ಸ್ನಾನದಲ್ಲಿ ಮೈಮರೆಸಿ
ಸೂರ್ಯನೊಂದಿಗೆ ಸಪ್ತಪದಿ ತುಳಿದು
ಬಣ್ಣದೋಕುಳಿ ಕೋಗಿಲೆ ಗಾನ ಬದುಕು ತುಂಬ
ನವದಂಪತಿ ಉಲ್ಲಾಸ ಪ್ರತಿ ಹಕ್ಕಿ ಕೊರಳಿಗೆ ಯುಗಾದಿ ಸಂಭ್ರಮ.
*****