ಓಂಽಽ ಶಾಂತಿಽಽಽ ಓಂಽಽ ಶಾಂತಿಽಽಽಽ||

ಓಂ ಶಾಂತಿಯೋಂ ಶಾಂತಿ ಓಂ ಶಾಂತಿಯೋಂ ಶಾಂತಿ
ಆತ್ಮಸಾಗರ ತುಂಬ ಓಂಕಾರವೊ
ಕಡಲೊಳಗೆ ಮುಗಿಲೊಳಗೆ ಜಗದೊಳಗೆ ಯುಗದೊಳಗೆ
ಶಿವನ ಸಾಗರ ತುಂಬ ಝೇಂಕಾರವೊ

ಓ ನೋಡು ಈ ಕಾಡು ಈ ಹಸಿರು ಈ ಹೂವು
ಓಂಕಾರ ಗಾನದಲಿ ಮೀಯುತ್ತಿವೆ
ಲಕ್ಷ ಪಕ್ಷಿಯ ಕಂಠ ವೃಕ್ಷ ರಾಜಿಯ ಪೀಠ
ಎಲ್ಲೆಲ್ಲು ಶಿವಗೀತ ಚಿಮ್ಮುತ್ತಿದೆ

ಓ ಧೀರ ದೇವಾತ್ಮ ಓ ಸಿದ್ಧ ಪೂತಾತ್ಮ
ಜೀಕಯ್ಯ ಜೋಕಾಲಿ ಶೂನ್ಯದೊಳಗೆ
ಮುನಿಯದಿರು ದೈವಕ್ಕೆ ಮರುಗದಿರು ಮೋಹಕ್ಕೆ
ನೀನಾಗು ನರಸಿಂಹ ಆತ್ಮದೊಳಗೆ

ಕಣ್ಣೊಳಗೆ ಕೂಸಾಗು ಕರುಣೆಯಲಿ ಶಿಶುವಾಗು
ನಿನ್ನೆದೆಯ ಹೂದೋಟ ಹಿಗ್ಗಿ ಸುರಿಸು
ಉಸಿರೊಳಗೆ ರಸವಾಗು ರಸದೊಳಗೆ ಋಷಿಯಾಗು
ನಿನ್ನಾತ್ಮ ಕಾರಂಜಿ ಚಿಮ್ಮಿ ಪುಟಿಸು
*****