ಸರಿಯಪ್ಪಾ ಕೃಷ್ಣ ಪರಮಾತ್ಮ
ಇದೇನಿದು ಆ ರಾಮ ನೋಡಿದರೆ ಮರದ ಮರೆಯಲ್ಲಿ ನಿಂತು
ಬಾಣ ಬಿಡೋದು: ನೀನು ನೋಡಿದರೆ
ಇದ್ದಕ್ಕಿದ್ದಂತೆ ಹೇಳ್ದೆ ಕೇಳ್ದೆ ಚಕ್ರ ಬೀಸಿ
ಯಾರನ್ನಾದರವರ್ನ ಕೊಂದೇಬಿಡೋದು
ಇದೆಲ್ಲಾ ಯಾವ ಧರ್ಮ? ಯಾವ ಯುದ್ಧ?
ಯಾವುದೋ ಓಬಿರಾಯನ ಕಾಲದ ಪುರಾಣಿಕರ ಮಾತ
ಕೇಳ್ಕೊಂಡು
ನೀನು ದೇವರು, ಏನ್ಬೇಕಾದರೂ ಮಾಡಬಹುದೂಂತ
ಬೀಗಬೇಡ: ಈಗ ಕಾಲ ಬದಲಾಗಿದೆ, ನಮ್ಮ ಸಿದ್ಧಯ್ಯ ಪುರಾಣಿಕರು
ಹೇಳಿರೋ ಮಾತಕೇಳು “ಏನಾದರೂ ಆಗು ಮೊದಲು
ಮಾನವನಾಗು”
ನಾವೇನೋ ಹುಲುಮಾನವರು ಸರಿ; ಆದರೆ ನೀನು ಸ್ವಲ್ಪವೂ
ಮನುಷ್ಯತ್ವವೇ ಇಲ್ಲದ ದೇವರು
*****

Latest posts by ಶ್ರೀನಿವಾಸ ಕೆ ಎಚ್ (see all)