Home / ಕವನ / ಕವಿತೆ / ಪುಣ್ಯಶಾಲಿ

ಪುಣ್ಯಶಾಲಿ

ನೀವೆಲ್ಲ ಪುಣ್ಯಶಾಲಿಗಳಮ್ಮ
ಹಠತೊಟ್ಟು ಬೈಗಳಿಂ ಕೋಪದಿಂ
ಕೋರಿಕೆಯ ಸಾಧಿಪಿರಿ, ಸುಖಿಸುವಿರಿ
ಒಡವೆ ವಸ್ತುವ ಪಡೆದು ಮೆರೆಯುವಿರಿ.
ಎನ್ನಲ್ಲಿ ಹರವಿಲ್ಲ ಮುನಿಸಿಲ್ಲ
ಬೈಗಳಂ ಮುನ್ನ ನಾ ಕಲಿತಿಲ್ಲ
ಅಸುವೊಂದು ದೇಹವೆರಡಾಗಿಹುದು
ಎಂದು ಸಂಸಾರ ನಡೆಸುವೆನಮ್ಮ.

ಎನ್ನ ಪತಿ ಮನೆಗೆ ಬರೆ ಮುಗುಳು ನಗೆ ಸೂಸುವೆನು
ಬಂದವರನುಪಚರಿಸಿ ನಲ್ನುಡಿಯ ನುಡಿಯುವೆನು
ಏಕಾಂತದಲ್ಲಿ ಮೆಲ್ಲನವರ ಬಳಿ ಸಾರುವೆನು
ತನಿವಣ್ಣು ಕೆನೆವಾಲು ತಾಂಬೂಲ ನೀಡುವೆನು.
ವಿನಯದಿಂ ಮೃದು ಮಧುರವಾಣಿಯಂ
“ಎಲೆ ನಲ್ಲ! ಮಾತೊಂದು ನಡೆಸುವೆಯ
ಕೇಳಲೋ ಬೇಡವೋ” ಎನ್ನುವೆನು.

ಒಡನವರು ನಗುನಗುತ
ಬರ ಸೆಳೆದು ಬಿಗಿದಪ್ಪಿ
“ಎಲೆ ದೇವಿ! ಎನ್ನುವರು
ಹೂಮಳೆಯ ಸುರಿಯುವರು
ಜಡೆ ಮುಡಿಯ ನೇವರಿಸಿ
ಬಳಿಯಲ್ಲಿ ಕುಳ್ಳಿರಿಸಿ
ತಂದೆತಾಯ್ಗಳ ಬಿಟ್ಟು ಬಂದಿರುವೆ
ಒಡಹುಟ್ಟಿದರ ಬಿಟ್ಟು ಬಂದಿರುವೆ
ನಾನೆ ಪರಮಾರಾಧ್ಯನೆಂದೆಂದು
ಕನಸಿನಲಿ ನೆನೆಸಿನಲಿ ತಿಳಿದಿರುವೆ
ಕುಸುಮ ಕೋಮಲ ಹೃದಯದಲಿ ಬಯಕೆ ಏನಿಹುದೊ
ಏನಿಹುದೊ ಈ ಎನ್ನ ಗೃಹಲಕ್ಷ್ಮಿ ಹೃದಯದಲಿ !
ರಾಣಿಯಲ್ಲವೆ ನೀನು
ನಾನು ನಿನ್ನಯ ತೊತ್ತು
ಸರ್ವಸ್ವ ನಿನಗಿರಲು
ಸರ್ವಾಧಿಕಾರಮಂ
ನಿನಗೆ ನಾ ಕೊಟ್ಟಿರಲು
ಎನ್ನ ಬೇಡಲದೇಕೆ ?”
ಎಂದೆನ್ನ ಆದರಿಸಿ ನುಡಿಯುವರು
ಕೊರಳ ಸರಿಗೆಯ ಕೀಲಿ ತೋರುವರು.

ಪ್ರೇಮ ಭಾಂಡಾಗಾರ ಎನಗಿರಲು
ಕನಕ ಭಾಂಡಾಗಾರ ಎನಗಿರಲು
ಎಲ್ಲವುಂ ಎನ್ನ ಕೈಯೊಳಗಿರಲು
ಒಪ್ಪದಲ್ಲಿ ಸಂಸಾರ ನಡೆಸುತಿರೆ
ಶಾಂತಿ ಸುಖ ನಗುವೆಲ್ಲ ತುಂಬುತಿರೆ
ಒಡವೆ ವಸ್ತುವನಿಟ್ಟು ಮೆರೆಯದಿರೆ
ಏನು ಕುಂದಪ್ಪುದೋ ನಾನರಿಯೆನಮ್ಮ ;
ನೀವೆಲ್ಲ ಪುಣ್ಯಶಾಲಿಗಳಮ್ಮ
ಎನಗೇನು ಆ ಪುಣ್ಯ ಬೇಡಮ್ಮ.
*****

Tagged:

Leave a Reply

Your email address will not be published. Required fields are marked *

ಬೆಳಗಿನ ಜಾವ ಆಗಲೇ ಐದು ಬಡಿದಿತ್ತು. ಎಲ್ಲೋ ಮಾಮರದಲ್ಲಿ ಕೋಗಿಲೆಯೂ ಕುಹೂ ಕುಹೂ ಎಂದು ಹಾಡುತಿತ್ತು. ಅಲ್ಲಲ್ಲಿ ಗಿಡಮರಗಳಲ್ಲಿ ಹಕ್ಕಿಗಳ ಚಿಲಿಚಿಲಿ ಕಲರವದೊಂದಿಗೆ ಸುಪ್ರಭಾತ ಹಾಡುತ್ತಿದ್ದವು. ಪ್ರಶಾಂತವಾದ ವಾತಾವರಣದಲ್ಲಿ ಸ್ವಾಮೀಜಿ, ಬೆಳಗಿನ ಪೂಜೆ ಮುಗಿಸಿ, ನಿತ್ಯದಂತೆ ಮಠದ ಪಾಕಶಾ...

“ಇನ್ನು ಗೇಣಿ ಕೊಡಬೇಕಾಗಿಲ್ಲವಂತೆ. ಒಕ್ಕಲಿಗೇ ಭೂಮಿಯಂತೆ.” ಊರಲ್ಲಿ ದಟ್ಟವಾಗಿ ಹಬ್ಬಿದ್ದ ಆ ವಾರ್‍ತೆ ಕುಂಞಂಬುನಲ್ಲಿ ಅಸಾಧ್ಯ ಕುತೂಹಲ ಕೆರಳಿಸಿತ್ತು. ಗೇಣಿ ಕೊಡದಿದ್ದರೆ ಧನಿಗಳು ಬಿಟ್ಟಾರೆಯೆ? ಗೇಣಿ ಕೊಡದೆ ಬೇರೆಯವರ ಭೂಮಿಯನ್ನು ಇಟ್ಟುಕೊಳ್ಳುವುದು ತಪ್ಪಲ್ಲವೆ? ಕು...

“ಮಮ್ಮಿ ! ಮಮ್ಮಿ ! ಬೇಗ ಬಾ” “ಅಡಿಗೆ ಮಾಡುತ್ತಾ ಇದ್ದೇನೆ, ಯಾಕೆ ಕಿರಿಚಿಕೊಳ್ಳುತ್ತಾ ಇದ್ದಿಯಾ ರೋಜಿ? ಬರುತ್ತೀನಿ ತಾಳು” ಎಂದಳು ಕೆಲಸದಲ್ಲಿ ನಿರತ ತಾಯಿ. “ಮಮ್ಮಿ! ಒಂದು ನಿಮಿಷ ಬಂದು ನೋಡು, ಕಾಗೆ ಪುಟ್ಟ ಅಳಿಲನ್ನು ಕುಕ್ಕಿ ನೋವು ಮಾಡುತ್ತಾ ...

ಈ ದಿನ ಹಿತ್ತಲ ತುಂಬ ಪಾರಿಜಾತ ಹೂವು ಸುರಿದಿದೆ. ಮತ್ತೆ ಸಂಪಿಗೆ ಮರದಿಂದ ಹೂವರಳಿ ಘಮ್ಮೆಂದು ವಾಸನೆ ಹರಿದಿದೆ. ಎರಡು ಪರಿಮಳ ಸೇರಿ ಎದೆಯಾಳಕೆ ಇಳಿದು ಒಳಗೊಳಗೆ ಒಂಥರಾ ಭಾವ ವಿಸ್ಮಯ ಅರಳಿದೆ. ಅಮ್ಮ ಒಲೆಯ ಮೇಲೆ ಕಡುಬು ಬೇಯಿಸುತ್ತಿದ್ದಾಳೆ. ಕೊಟ್ಟೆ ಕಡುಬಿನ ವಾಸನೆ ಇಡೀ ಮನೆಯನ್ನು ಪಸ...

ಆ ದಿನ, ಡಾಕ್ಟರ್ ಪಾರ್ವತಿಯವರಿಗೆ ಆತಂಕದ ದಿನ! ಒಂದು ವಿಧದ ಚಂಡಮಾರುತವನ್ನೆಬ್ಬಿಸಿದಂತಹ ಘಟನೆಯಿಂದ ನಗರದ ಅನೇಕರೂ, ಗಣ್ಯರೂ ಸೇರಿದಂತೆ, ಆ ಕೋರ್‍ಟಿನಲ್ಲಿ ಜನಸಂದಣಿ ಕಿಕ್ಕಿರಿದಿತ್ತು. ಆ ನಗರದ ಪ್ರಖ್ಯಾತ ವೈದ್ಯ ಡಾಕ್ಟರ್ ಪಾರ್ವತಿದೇವಿಯವರು ಸಾಕ್ಷಿ ನೀಡಬೇಕಾಗಿದ್ದರಿಂದ ಕೋರ್ಟಿನ ...

“ಭಟ್ಟರೇ, ನಿಮಗೆ ಹೇಳಲೊ? ಇಘ್ನೇಶ್ವರರಾಯರು ಅಂದರೆ ನಮ್ಮ ಜಾತಿಗೇ ಭೂಷಣ. ಅವರು ವಕೀಲಿ ಮಾಡಲು ಸುರು ಮಾಡಿದಂದಿನಿಂದ ಬೇರೆ ಜಾತಿಯವರ ಸೊಕ್ಕು ಮುರಿದಿದೆ. ಈಗ ಶೆಟ್ಟಿ ಶಾನಬೋಗರೆಲ್ಲ ಅವರಿಗೆ ರಾಯರೇ ಎಂದು ಸಲಾಮು ಮಾಡುವವರೇ! ನಿಮಗೆ ಹೇಳಲೊ? ಅದು ಒಬ್ಬೊಬ್ಬರ ಜನ್ಮಕುಂಡಲಿ ಇದ್ದ...