ಹೊತ್ತಾರೆ ಸೂರ್‍ಯನ ಕಿರಣಗಳು ಮುತ್ತಿಡಲು
ಹಾಳು ಹಕ್ಕಿಯ ಹಾಡು ಕಿವಿ ತುಂಬಲು
ಕಿಸುರುಗಣ್ಣನು ತೆರೆದು ಸೆಟೆದ ಹೂ-ಮೈಯ ಮುರಿದು
ಆಕಳಿಸುವಳು ನಮ್ಮ ಪುಟ್ಟ ಕೆಂಚವ್ವ…..
ಚೂರು ಅಂಗಳವನೆ ಪರಪರ ಕೆರೆದು
ಒಡೆದ ಗಡಿಗೆಯ ಸೊಂಟಕ್ಕೆ ಕರೆದು
ಊರ ಗಟ್ಟಿಗಿತ್ತಿಯರೊಡನೆ ಗುದ್ದಾಡಿ
ನೀರು ತರುವಳು ನಮ್ಮ ಪುಟ್ಟ ಕೆಂಚವ್ವ…..
ಕರವೀರದ ಕೊಂಬೆಗಳ ಕಡಿದು
ಒಣಗಿದ ರೆಂಬೆಗಳನು ಬಡಿದು
ಕಡ್ಡಿ-ಪುರಳೆಯ ಒಟ್ಟಿಗೆ ಒಗೆದು
ಬೆಂಕಿ ಉರಿಸುವಳು ನಮ್ಮ ಪುಟ್ಟ ಕೆಂಚವ್ವ…..
ಚಟಾಕು ಹಾಲಿಗೆ ಚಿಟಿಕೆ ಪುಡಿಯನು ಬೆರೆಸಿ
ಪಾವು ನೀರನೆ ಸುರಿದು
ಘಮ್ಮೆನ್ನುವ ಹಾಗೆ ಟೀ ಕುದಿಸುವಳು
ಮಾಯಾವಿ ಹುಡುಗಿ ನಮ್ಮ ಪುಟ್ಟ ಕೆಂಚವ್ವ…..
ಹೊಲದಲ್ಲಿ ಸಂಜೆಯ ತನಕ ದುಡಿದು
ಅಕ್ಕಿ-ಮೆಣಸಿನಕಾಯಿ ಪಡೆದು
ತಮ್ಮನ ಬಾಯ ಚಪಲಕ್ಕೆ ಉದ್ದು-ಕಡಲೆಯ
ಕದ್ದು ತರುವಳು ನಮ್ಮ ಪುಟ್ಟ ಕೆಂಚವ್ವ…..
ದಾರಿಯಲಿ ಅಂತರಗಟ್ಟಮ್ಮನಿಗೆ ಕೈ ಮುಗಿವಳು
ಹೊಟ್ಟೆ ಬಟ್ಟೆಗಿಟ್ಟು ಮಡುಗು ಎಂದು ಬೇಡುವಳು
ಹಕ್ಕಿ ಗೂಡಿಗೆ ಮರಳುವಂತೆ
ಗುಡಲಿಗೆ ಮರಳುವಳು ನಮ್ಮ ಪುಟ್ಟ ಕೆಂಚವ್ವ…..
ಸೋರುವ ಬುಡ್ಡಿಯನೂ ಒಲಿಸಿ ಉರಿಸುವಳು
ಪಾವಕ್ಕಿಯಲಿ ತಂಗಿ ತಮ್ಮನ ಹೊಟ್ಟೆ ತೂಗಿಸುವಳು
ಹರಿದ ಹಚ್ಚಡವನೆ ಸಮನಾಗಿ ಎಲ್ಲರಿಗೆ ಹೊದಿಸಿ
ಕೈ ಚಳಕ ಮೆರೆವಳು ನಮ್ಮ ಪುಟ್ಟ ಕೆಂಚವ್ವ…..
ಅಪ್ಪನ ಕುಡಿತ-ಜೂಜಿಗೆ ಬೆದರುವಳು
ಅವ್ವನ ದಮ್ಮು-ಗೂರಲಿಗೆ ನೋಯುವಳು
ಸಿಟ್ಟಿನಲಿ ಕಟ್ಟಿರುವೆ, ಚಿಟ್ಟೆ ನಗೆಯವಳು
ದಿಟ್ಟ ನಡೆಯವಳು ನಮ್ಮ ಪುಟ್ಟ ಕೆಂಚವ್ವ…..
ಹೂವಿನ ವಾಸನೆ ಹಿಡಿದು ಹೆಸರು ಹೇಳುವಳು
ಹಕ್ಕಿಯ ಕೂಗನಳೆದು ಅಣಕಿಸುವಳು
ಎರೆಮಣ್ಣನು ಕಲಸಿ ಬೊಂಬೆಯ ಮಾಡುವಳು
ಬೊಂಬೆಗೂ ಜೀವ ಕೊಡುವಳು ನಮ್ಮ ಪುಟ್ಟ ಕೆಂಚವ್ವ…..
ಹುಲಿಯನಿಗೆ ಹಳ್ಳದಲಿ ಮಜ್ಜನ ಮಾಡಿಸುವಳು
ಭೂತಾಯಿ ಮೀನ ಕಿರುಬೆರಳಲಿ ಕುಣಿಸುವಳು
ಗಟ್ಟಿ ಗುಂಡಿಗೆಯವಳು ಕಾಳವ್ವನ
‘ಕಿಡಿ’ ಇವಳು ನಮ್ಮ ಪುಟ್ಟ ಕೆಂಚವ್ವ…..
*****