ಕುತೂಹಲದ ಹೃದಯ ಕಣ್ಣು ಮನಸು
ಒಮ್ಮಿಂದೊಮ್ಮೆಲೆ ಕಕ್ಕಾಬಿಕ್ಕಿ
ಲಂಡನ್ ಸಡಗರದ ಕನಸು ನನಸಾಗುವ
ಹತ್ತಿರ ಹತ್ತಿರದ ಸಮಯ
ಸಂಭ್ರಮದ ವಿದ್ಯುತ್ ಸಂಚಾರ ಒಳಗೊಳಗೇ….
ಸಖಿಯ ಉಲಿತ ಕೆಲವೇನಿಮಿಷ
ನಗರದಮೇಲೆ ಹಿಮಾಚ್ಫಾದನೆ
ಮೈನಸ್ ಸೆಲ್ಸಿಯಸ್ ಹಿತ್ರೋಗೆ ಹೆಜ್ಜೆ ಇಡಲು
ಒಂದು ಎರಡು ಮೂರು ನಾಲ್ಕು ಸುತ್ತು
ತಿರುಗುಚಕ್ರದನುಭವ
ಏರಿಳಿತ ಹೃದಯ ಬಡಿತ ಒಳಗೆಲ್ಲ ನಿಶ್ಶಬ್ಧ
ಹುಡುಕಾಟ ಹುಡುಕಾಟ ಎಲ್ಲಿದೆ ರಾಣಿಮಹಲು
ಮೋಡ ಮಿಣುಕು ತುಣುಕು ಮಿಣುಕು
ಕಣ್ಣು ಮುಚ್ಚಾಲೆಯಾಟ ಐದನೆಯ ಸುತ್ತು
ಆಕಾಶಪ್ರದಕ್ಷಣೆ ವೀಕ್ಷಣೆ
ಪೆಗ್ಗೇರಿಸಿ ಬೆಚ್ಚಗಾಗಿರುವವರ ಇನ್ನೂ ಸುಖನಿದ್ರೆ
ಕಾಫಿಹೀರಿ ಕಿಟಕಿಯಾಚೆ ನೆಟ್ಟ ದೃಷ್ಟಿ
ನಡುವೆ ಮಂಜು ಕೊರೆತ
ಮೋಡ ಭೇದಿಸಿ ಇಳಿಮುಖದ ವಿಮಾನ
ತುಂಡುತುಂಡಾಗಿ ಕೊನೆಗೊಮ್ಮೆ ಇಡಿಯಾಗಿ
ಗಕ್ಕನೆ ಕಾಣಿಸಿತೊಂದು ಅವರಾವತಿ
ಮುಸ್ಸಂಜೆ ಹೊತ್ತು ಮಿಣಿಮಿಣಿ,
ಝಗಝಗ ದೀಪ ಹರಿದಾಡುವ ಬಣ್ಣ
ರಸ್ತೆಗಳ ಉದ್ದಗಲ ಯಕ್ಷಯಕ್ಷಿಣಿಯರು
ಇನ್ನೂ ಹುಡುಕಾಟ ರಾಣಿಯ ಮಹಲು
ಮಹಲಿನೊಳಿಲ್ಲ ರಾಜನ ಸಂಗಡ ರಾಣಿ
ಇವನಬಿಟ್ಟು ಅವನಾರೋ
ಅವನಬಿಟ್ಟು ಇನ್ಯಾರೋ, ಹಾದಿಹೆಣವಾಗಿ
ಬಿದ್ದ ರಾಜಕುಮಾರಿ
ಸೂರ್ಯಮುಳುಗಿ ಕಗ್ಗತ್ತಲು
ಅರಮನೆಗೆ ಗ್ರಹಣ
ನೂರೊಂದು ಕಥೆಗಳ ನಗರ
ಗಹಗಹಿಸಿ ನಗುವ ದೀಪಗಳು
ನನ್ನೆದೆಯೊಳಕ್ಕೆ ಆಲಂಗಿಸುವ ಕುತೂಹಲ.
*****