ಒಡಲಲ್ಲೊಂದು ಕುಡಿ
ಚಿಗುರಲಿಲ್ಲವೆಂದೇಕೆ
ಹಲುಬುವಿರಿ, ಕುಡಿ
ಗಾಗಿ ಹಂಬಲಿಸಿ ಕೊರಗಿ
ಸೊರಗಿ ಬಾಳನ್ನೇಕೆ
ವ್ಯರ್ಥಗೊಳಿಸಿ ಶೂನ್ಯ
ವನ್ನಾಗಿಸುವಿರಿ
ನಿಮ್ಮದೇನು ರಘುವಂಶ
ಸೂರ್ಯವಂಶವೇ
ಕುಲದೀಪಕನಿಲ್ಲದೆ
ವಂಶ ಅಳಿಯತೆನಲು
ಒಡಲು ಬರಿದಾಗಿಸಿದ
ಆ ದೈವಕೆ ಸಡ್ಡು ಹೊಡೆದು
ನಿಮ್ಮ ಹೃದಯವನ್ನೊಮ್ಮೆ
ವಿಶಾಲಗೊಳಿಸಿ
ಮಮತೆ
ಮರೀಚಿಕೆಯಾಗಿರುವ ಕಂದಮ್ಮಗಳತ್ತ
ದೃಷ್ಠಿಹಾಯಿಸಿ, ತರುವಿಲ್ಲದ ಲತೆಗಳಿಗೆ
ಆಶ್ರಯವಾಗಿ ಬರಿದಾದ ಮಡಿಲ ತುಂಬಿಸಿಕೊಳ್ಳಿ
ಒಡಲು ಬರಿದಾದರೇನು
ಮಡಿಲು ಬರಿದೇ
ಯಾರದೋ ತಪ್ಪಿಗೆ
ಬಲಿಯಾಗಿ ಪರಿತಪಿಸುವ
ಕಂದನಿಗೆ, ಶಾಪವಾಗಿರುವ
ಬಾಳಿಗೆ ವರನೀಡಿ
ಯಾರ ಮನೆಯ ಅಂಗಳದ
ಹೂವೋ ಎಂದು ಜಿಗುಪ್ಸೆ
ತೋರದೆ ಕರೆದೊಯ್ಯಿರಿ ನಿಮ್ಮರ ಮನೆಗೆ
*****