ಉದ್ಯೋಗ ಪರ್ವ

ಬೇಹಿನವರಿಂದ ಸುದ್ದಿ ಸಂಗ್ರಹಿಸಿ ರಾಯಭಾರಿಗಳ ಕರೆಸಿ
ಕಿಟಕಿಬಾಗಿಲುಗಳ ಭದ್ರಪಡಿಸಿ ಮಂತ್ರಾಗಾರದಲ್ಲಿ
ಒಂದು ದುಂಡು ಮೇಜಿನ ಸುತ್ತ ಆಪ್ತೇಷ್ಟನಂಟರೂ
ಮಂತ್ರಿಗಳೂ ವಿಶೇಷ ಆಮಂತ್ರಿತರೂ ಪರಿಣತರೂ ಮಂಡಿಸಿ
ಗೂಢಾಲೋಚನೆ ನಡಿಸಿ
ಫೈಲುಗಳ ಮೇಲೆ ಫೈಲುಗಳೋಡಿ
ಟಿಪ್ಪಣಿಗಳ ಕೆಳಗೆ ಟಿಪ್ಪಣಿಗಳು ಕೂಡಿ
ಮಾತಿಗೆ ಮಾತು ಸೇರಿ ಮಾತಿನ ಧ್ವನಿಯೇರಿ
ಧ್ವನಿಯ ಪ್ರತಿಧ್ವನಿಯ ಕಾವಿನಲ್ಲಿ ಚರ್ಚೆ
ಉದ್ದುದ್ದ ಬೆಳೆದು ಬೇವಸಗೊಂಡು
ಪೂರ್ವಯೋಜಿತ ನಿರ್ಣಯದ ಕಡೆಗೆ
ದಾರಿಗಾಣದೆ ಕಾದು ಆಕಳಿಸಿ ಸಿಗಾರು ಹಚ್ಚಿ
ಸೀಲಿಂಗಿನತ್ತ ಹೊಗೆ ಫೂ ಎಂದು ಊದಿ
ಮೆತ್ತೆಗೆ ಶಿರ ಮಂಡಿಸಿದರೆ ಧ್ಯಾನಾವಸ್ಥೆ

ಮತ್ತೆ ಸನತ್ಸುಜಾತ ವಿದುರಾದಿಗಳಿಂದ ಲೌಕಿಕ ಪಾರಲೌಕಿಕ
ಆರ್ಥಿಕ ಪಾರಮಾರ್ಥಿಕ ನೀತಿ ಹೇಳಿಸಿಕೊಂಡು
ಮತ್ತೆ ಶಕುನಿ ಕಲಿಸಿದ ಅನೀತಿ ಜ್ಞಾಪಿಸಿಕೊಂಡು
ಕಳೆದ ಪರ್ವಗಳ ನಂಜುರಕ್ತ ಮೆಲ್ಲನೇ ಒತ್ತಡಿಸಿ
ಕಾಳೆಗವನೇ ಸಮೆದು ಬರುವೆವು ಎಂದು ಒಮ್ಮತ ಬಂದು
ಧರ್ಮ ಸಂಸ್ಥಾಪನೆಯಂಥ ಆರ್ಷ ಉದ್ದೇಶಕ್ಕೆ
ಜನ್ಮವೆತ್ತಿಬಂದ ಪುರುಷಾರ್ಥಕ್ಕೆ
ಕರ್ಮಕಾಂಡದ ವಿಧ್ಯುಕ್ತ ಕಾರ್ಯನಿರ್ವಾಹಕ್ಕೆ
ಎಂಬಿತ್ಯಾದಿಯಾಗಿ ಶ್ರುತಿಧರ್ಮ ಸಂಹಿತೆಗಳಿಂದ
ಬೇಕುಬೇಕಾದ ತತ್ವಗಳನ್ನಾರಿಸಿ ಠರಾವುಗಳಿಗೆ ಜೋಡಿಸಿ
ಕಾಳೆಗವನೇ ಸಮೆದು ಬರುವೆವು ಎಂದು ಘೋಷಿಸಿ

ಘೋಷಣೆಯ ಕಾರ್ಯರೂಪಕ್ಕೆ ತೊಡಗಿದರೆ
ತೊಡಗಿದರೆ ತೊಟ್ಟ ಮಾರಕಾಸ್ತ್ರ ಪ್ರಯೋಗದಿಂದ ಈ ಗರ್ಭಕ್ಕೆ
ಗರ್ಭಸ್ಥ ಜೀವಕ್ಕೆ ಯಾತರ ರಕ್ಷೆ?
ಅಸಹಾಯಕಿ ಅಬಲೆ ಉತ್ತರೆಯೂ ನಿರುತ್ತರೆಯಾಗಿ ನಿಂತರೆ
ಅಲೆದೀತು ಒಂದು ವೇಳೆ ಈ ಪ್ರಶ್ನೆ ಹೀಗೆ ಕೊನೆಗೂ
ತನ್ನ ಉತ್ತರ ತಾನೆ ಕಂಡುಕೊಂಡೀತು ಒಂದು ವೇಳೆ
ಹೇಗಿದ್ದರೂ ಅದು ಈ ಪರ್ವದ ಹೊರತು ಇದರ ಸಮಸ್ಯೆಗಳ ಹೊರತು
ಈಗ ಸಮಗ್ರ ಮಗ್ನತೆಯನ್ನೂ ಕೂಡ
ಜರೂರು ವಿಚಾರಗಳ ವರ್ತಮಾನದಲ್ಲಿ ಕೇಂದ್ರೀಕರಿಸಿ
ಹಂಚಿಗೆಳ ಯೋಚಿಸುವ ಸಂಧಿಸುವ ಚಿಂತಿಸುವ ಪರ್ವ
ದೊಂಬಿ ಪಿತೂರಿ ಒಳಸಂಚಿನ ಸೈತಾನ ಕರ್ಮಗಳಿಂದ ಹಿಡಿದು
ಕುರುಕ್ಷೇತ್ರದ ಹೊಯ್ಕಯ್ ವರೆಗೂ
ಇದೆಲ್ಲದರ ಸಾಧ್ಯಾಸಾಧ್ಯತೆಗಳ ಕುರಿತು
ಇದರ ರಾಜತಾಂತ್ರಿಕ ಸೂತ್ರಗಳ ಕುರಿತು
ಕ್ಷೇತ್ರದ ಸಿದ್ಧತೆಯ ಕುರಿತು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಡಿಲು ಬರಿದೇ
Next post ಆಕಾಶವಾಣಿ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಇಬ್ಬರು ಹುಚ್ಚರು

    ಸದಾಶಿವನಿಗೆ ಹೀಗೆ ಹುಚ್ಚನಾಗಿ ಅಲೆಯುವ ಅಗತ್ಯ ಖಂಡಿತಕ್ಕೂ ಇರಲಿಲ್ಲ. ಅವನಿಗೊಂದು ಹಿತ್ತಿಲು ಮನೆಯೂ, ಹಿತ್ತಿಲಲ್ಲಿ ಸಾಕಷ್ಟು ಫಲ ಕೊಡುವ ಗೇರು ಮರಗಳೂ ಇದ್ದವು. ದಿನಕ್ಕೆ ಸಾವಿರ ಬೀಡಿ… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ಮೃಗಜಲ

    "People are trying to work towards a good quality of life for tomorrow instead of living for today, for many… Read more…