ಕುದುರೆ ಏರಿಬರುವ
ಶೂರಧೀರ ನನ್ನವ
ಲೋಕಸುಂದರ ಚೆನ್ನ ಚೆನ್ನಿಗ
ತನ್ನ ತುಂಬಿಕೊಂಡ ಕಣ್ಣ
ಒಳಗೆ ಮತ್ಯಾರನೂ
ನೋಡ ಬಯಸದವನ
ಕೊರಳಿಗೆ ತನ್ನ ಮಾಲೆ
ಕನಸು ಕಂಡ ಮಾಧವಿ
ಏನಾಯ್ತೆ ಸಖಿ ನಿನ್ನ ವಿಧಿ
ಮಾರಾಟವಾಯ್ತೆ ಒಡಲು
ಅಷ್ಟಶತ ಶ್ವೇತ ಅಶ್ವಕೆ
ಹುಂಬ ಶಿಷ್ಯನ ಒಣ
ಪ್ರತಿಷ್ಠೆಯ ತೆವಲಿಗೆ
ಕುಚೋದ್ಯದ ಗುರುದಕ್ಷಿಣೆ
ಬಾಡಿಸಿತೇ ಇರುವಂತಿಕೆಯ,
ಮದುವೆ ಇಲ್ಲಾ, ಇಲ್ಲಾ
ತಾಳಿ ಕೊರಳಲಿ
ಹಯಕೆ ಬದಲು ಮಾಧವಿ
ಕೀರ್ತಿಗಾಗಿ ಹೆತ್ತಕುಡಿಯದಾನ
ರಾಜಕುವರಿಯ ಲಾವಣ್ಯಕೆ
ಮುದಿರಾಜನ ತಲ್ಲಣ
ಮೀಸಲು ಮುರಿವ ಔತಣ
ವರುಷಕ್ಕೊಬ್ಬ ಗಂಡ
ಅಲ್ಲ ಗಂಡು
ನಾಲ್ಕು ಹೆತ್ತರೂ ಮಡಿಲು ಬರಿದು
ಬಾಡಿಗಿಗಿದೆ ಒಡಲು
ತುಂಬಿಸಿ ಬೇಕಾದರೆ ಮಡಿಲು
ಬೇಕಾಗಿದೆ ಅಷ್ಟೆ ಶ್ವೇತಾಶ್ವ
ಯುಗ ಯುಗ ಕಳೆದರೂ
ಈ ಹೆಣ್ಣುಗಳು ಮಾಧವಿ, ದ್ರೌಪದಿ
ಸೀತೆ ಅಹಲ್ಯೆಯರೇ
*****