ಹೊತ್ತು ಮೀರುತ್ತಿದೆ
ಇನ್ನೇನು ಈಗಲೋ ಆಗಲೋ
ತೆರೆ ಮೇಲೇಳುವ ಸಮಯ!
ಗಿಜಿಗುಡುತಿದೆ ಸಭಾಂಗಣ
ಸುತ್ತ ಹಬ್ಬಿದೆ ಮಬ್ಬು!

ಸಾಕಿನ್ನು ಮೇಲೇಳು
ಮುಗಿದಿಲ್ಲವೇ ಇನ್ನೂ ಪ್ರಸಾಧನ?
ತುಟಿಬಣ್ಣ ಒಂದಿನಿತು ಢಾಳಾಯ್ತು
ಕೆನ್ನೆಗಿನ್ನೊಂದಿಷ್ಟು ಕೆಂಪಿದ್ದರಾಗಿತ್ತು!
ಸರಿಪಡಿಸು ಸುಕ್ಕಾದ ಸೀರೆ ನೆರಿಗೆ

ಕಾದಿದೆ ರಂಗಸ್ಥಳ
ನಿನ್ನ ಪ್ರಥಮ ಪ್ರವೇಶಕ್ಕೆ
ಎದೆ ಢವಢವಿಸುತಿದೆಯೆ?
ಹೊದೆದುಕೋ ನಗೆಯ ಸೆರಗ
ಬಚ್ಚಿಡು ಕಣ್ಣಂಚಿನ ಕಂಬನಿಯ!

ಕಿವಿತೂತಾಗಿಸುವ ಕರತಾಡನಕೆ
ಮೈ ಜುಮ್ಮೆನಿಸುವ ಶಿಳ್ಳಿಗೆ
ಸಮೂಹದ ಕಟುಟೀಕೆಗೆ
ಬೆಚ್ಚೀಯ ಮತ್ತೆ!
ಅದೆಲ್ಲಾ ಇಲ್ಲಿ ಮಾಮೂಲೇ!

ಅದೋ ತೆರೆ ಏಳುತಿದೆ
ನಿನ್ನೆಡೆಗೆ ಬೆಳಕು ಹೊರಳುತಿದೆ
ವಾದ್ಯ ಮೊಳಗುತಿದೆ
ಎಲ್ಲಾ ಸಿದ್ಧವಾಯ್ತಲ್ಲಾ?
ನಡೆ ಇನ್ನು ರಂಗಸ್ಥಳಕೆ!

ಅಭಿನಯದ ಅಮಲಿನಲಿ
ಮತ್ತೇರಿ ಬೀಳುವೆಯೋ?
ಅಟ್ಟಹಾಸದ ನಗೆಗೆ ತಾಳತಪ್ಪುವೆಯೋ?
ಗೆಲ್ಲುವೆಯೋ? ಸೋಲುವೆಯೋ?
ಕಾಲ ಕಾಯುತ್ತಿದ್ದಾನೆ ದಾಖಲಿಸಲು!
*****