ಬೇರಿಳಿಸಿ ಬೆಳೆಯುತ್ತಿದೆ
ಬುಡ ಸಡಿಲವೆನ್ನುವ
ಅರಿವಿಲ್ಲದೆ
ಎಲ್ಲೋ ಮೊಳೆತು, ಚಿಗುರಿ
ತಾಯ ಗಿಡವ ಮೀರಿ
ಸಾರವೆಲ್ಲ ಹೀರಿ
ಎತ್ತರವ ಏರಿ
ಬೆಳೆಯುವನೆಂಬ ಹಮ್ಮು
ಅದೆಷ್ಟು ಗಳಿಗೆ
ಕರುಳ ಹರಿದು ನೆತ್ತರವಹರಿಸಿ
ಬುಡಕಿತ್ತ ಬೇರು
ಮತ್ಯಾವುದೋ ಮಣ್ಣಿನಲಿ
ಆಳವಾಗಿ ಹೂತು
ಬೇರಿಳಿಸಿ
ಬೆಳೆಯುವುದೆಂತಹ
ಸೋಜಿಗ
ತಾಯಿ ಗಿಡವ ಮರೆತ ನೋವು
ಮುರುಟಿ ಕ್ಷಣದೊಳಗೆ
ಬೇರ ಇಳಿಸಿ
ಸಾರ ಗಳಿಸಿ
ಮೆಲ್ಲನೆ ತಲೆ ಎತ್ತಿನಿಂತ ಪರಿ
ಆಹಾ ಪ್ರಕೃತಿ ಎಂಥ ಉದಾರಿ
ಮಣ್ಣು ಯಾವುದಾದರೇನು
ಬೇಕಷ್ಟೆ ಒಂದಿಷ್ಟು ನೀರು,
ಬೆಳಕು
ಜೊತೆಗಷ್ಟು ಸಾರ
*****