ಬಣ್ಣ ಬಣ್ಣದ ಹೂಗಳು, ಗಾಜಿನ ಚೂರುಗಳು
ಚಿತ್ತಾರದ ಗರಿಗಳು
ತರಾವರಿ ಬೆಣಚುಕಲ್ಲು, ಸಿಂಪಿ
ಕವಡಿಗಳ ತಂದು ಸಂಭ್ರಮಿಸುವ-

ಮುಂಜಾವಿನ ಮಂಜು
ಮುಸ್ಸಂಜೆಯ ಕೆಂಪು ಪ್ರೀತಿಸುವ-
ಆಕಾಶದಂಗಳದೊಳು ಹಾರಾಡಿ
ಏನೆಲ್ಲಾ ಬಾಚಿ ತಬ್ಬಿಕೊಳ್ಳುವ
ಕನಸುಗಳಿಗೆ ಕಾವೂಡಿಸುವ
ಹದಿಹರೆಯದ ವಯಸ್ಸು, ಮುದಗೊಳ್ಳುವ ಮನಸ್ಸು.

ನೋಡ ನೋಡುತಿರೆ
ನೆಲದೆದೆಯಿಂದ ಆಕಾಶದಂಗಳಕೆ ನೆಗೆತ
ಸಂತಸ, ಭಯ, ಬೆರಗು, ವಿಸ್ಮಯಗಳ ಆವರಿಕೆ.
ಸಡಗರ ಸಂಭ್ರಮಗಳ ಬಳ್ಳಿ ಹೆಣೆಯುವಿಕೆ
ಮಾತು ಮೂಕವಾಗಿ ಮೌನವೇ ಮಾತನಾಡುತಾ
ಕನಸುಗಳು ಬೀಜೊಡೆಯುವಿಕೆಗೆ
ಉತ್ಸಾಹದ ಪನ್ನೀರು–
ಹದನಾದ ನಾಡಿ ಬಡಿತದ
ಗರಿಯೊಡೆದ ಹಕ್ಕಿ ನಾನೀಗ.
*****

Latest posts by ಲತಾ ಗುತ್ತಿ (see all)