ಮನೆಗೆ ಹಿರೀಮಗ
ಹೊಸಿಲು
ಎರಡೂ ಒಂದೇ
ಬೊಟ್ಟು ಬಳಿದುಕೊಂಡರೂ
ಎಡವುವವರು, ತುಳಿಯುವವರು,
ದಾಟುವವರು ಇದ್ದದ್ದೇ

ಮನೆಯ ಕಾಯುವ ಭಾರ
ಹೊಸಿಲಿಗೂ
ಹಿರಿ ಮಗನಿಗೂ
ಸಮನಾಗಿ ಹಂಚಿಕೆಯಾಗಿದೆ
ಆಕಳಿಸಿದರೆ
ತಲಬಾಗಿಲ ಮೇಲೆ
ಹಲ್ಲಿ
ಲೊಚಗುಟ್ಟಿ ಎಚ್ಚರಿಸುತ್ತದೆ

ಭೂಮಿ
ತಾಯಿಯ ಚೊಚ್ಚಿಲ ಮಗ
ನೇಗಿಲು
ಹೆಗಲೇರಿಸಿ ಹುಟ್ಟಿದವನು
ಬಂಜೆ ಎದೆಯೊಳಗೆ
ಹೆಣವಾಗಿ ಕೊಳೆತರೂ
ಉಸಿರಾಡುವವನು

ಕಂಡ ಕನಸುಗಳೆಲ್ಲಾ
ಸಿದಿಗೆ ಕಟ್ಟಿ
ಸಿಂಗರಿಸಿ
ಹೊಸಿಲ ಬುಡಕೆ ಹೂತು
ಊದು ಬತ್ತಿಯ ಹಚ್ಚಿದೆ
ಮುಲುಗುವ ಸದ್ದು
ನಿಮಗೂ ಕೇಳಿಸುತ್ತಿರಬಹುದು

ಅದೇ ಹೊಸಿಲ ಎಡ ಬಲಕು
ಸೂರ್ಯ
ಚಂದ್ರರ ಬರೆದು
ದೀಪ ಹಚ್ಚಿದ
ಒಳಗೂ ಹೊರಗೂ ಬೆಳಕಾಗಲು
ಎಣ್ಣೆ ಇರದಿದ್ದರೂ
ಉರಿದು

ಹೊಸಿಲಿಲ್ಲದ ಬಾಗಿಲು
ಮುಚ್ಚುವ ಕಾಲವಿದು
ಬಂದು ಸೇರಿಕೊಳ್ಳಿ
ಮಣ್ಣಿನ ಮಕ್ಕಳೆಲ್ಲಾ
ಬಾಗಿಲಿಗೆ
‘ಬಾರೇ ಬೇಲಿ’ ಬಡಿಯುವ ಮುನ್ನ
*****