ಒಂದು ಸುಂದರ ಬಿದರಿನ ತೋಪು. ತೋಪಿನ ಒಳಗೆ ಪುಟ್ಟ ಮನೆ. ಮನೆಯ ಮುಂದೆ ಪುಟ್ಟ ಕೊಳ. ಕೊಳದ ಸೋಪಾನದಲ್ಲಿ ಪ್ರಕೃತಿಯ ಸೌಂದರ್‍ಯ ಸವಿಯುತ್ತ ಕವಿ ಕುಳಿತಿದ್ದ. ಕವಿ ಮನವು ಹಾಡಿದಾಗ ಬಿದಿರು ಬೊಂಬು ತನ್ನ ಹೃದಯದ ಖಾಲಿ ಜಾಗದಲ್ಲಿ ನಾದ ತುಂಬಿಕೊಂಡು ನಲಿಯುತ್ತಿತ್ತು. ಕವಿಯ ಹಾಡಿನ ನಾದ ಲಹರಿ ಜಲತರಂಗದಲ್ಲಿ ಒಂದಾಗಿ ಲೀನವಾಗುತಿತ್ತು. ಕೊಳದ ಕಟ್ಟೆಯಲ್ಲಿ ಕುಳಿತ ಹಕ್ಕಿ ಕವಿತೆ ತುಂಬಿದ ನೀರನ್ನು ಕುಡಿದು ಸಂತಸದ ಹಾಡನ್ನು ಹಾಡುತಿತ್ತು. ಕವಿಮನ ಒಮ್ಮೆ ಬರಿದಾಯಿತು. ಸ್ಫೂರ್‍ತಿ ಬತ್ತಿ ಮೋಡ ಕವಿಯಿತು. ಕೊಳದ ಹೃದಯದಿಂದ ಕಾರುಣ್ಯದ ಕವಿತೆಗಳು ತೇಲಿ ಬಂದವು. ಹಕ್ಕಿ ರೆಕ್ಕೆ ಬಡಿದು ಹಾಡತೊಡಗಿತು. ಪ್ರಕೃತಿಯ ವೃಂದಗಾನದಲ್ಲಿ ಕವಿಮನ ಸ್ವಾಂತ್ವನ ಪಡೆದು ಮುದ ಗೊಂಡಿತು. ಕವಿ ತುಂಬಿ ಕೊಟ್ಟಿದ್ದ ಕವಿತೆಗಳೆಲ್ಲ ಮತ್ತೆ ಎದೆತುಂಬಿ ನಲಿದು ಬಂದವು. ಬಿದಿರ ಭಾವಕ್ಕೆ, ಕೊಳದ ಕಾವ್ಯಕ್ಕೆ, ಹಕ್ಕಿಯ ನಲುಮೆಗೆ, ಕವಿ ಮಾರು ಹೋದ. ಪ್ರಕೃತಿಯಲ್ಲಿ ಒಂದಾದ.
*****


















