ಓ, ಮಹಾತ್ಮನೆ, ನಿನ್ನ ಬಂದಿಸಿಟ್ಟಿಹರೆಂದು
ಹಲರು ತಿಳಿದಿಹರು, ದಿಟ; ಆದರದು ತಪ್ಪೆಣಿಕೆ:
ಬಂಧನವ ಬಯಸಿ ಬರಮಾಡಿಕೊಂಡಿಹೆ; ಜನಕೆ
ಬಂಧನವೆ ಬಿಡುಗಡೆಗೆ ಹೆದ್ದಾರಿಯೊಂದೆಂದು
ತೋರಿಸಲು. ಜಗ ಜನಾಂಗಗಳೆಲ್ಲ ತಾವಿಂದು
ತಮ್ಮ ನಾಯಕರಿತ್ತ ಕುರುಡಾಣತಿಯ ಪಿಡಿದು
ತಾವಣ್ಣ ತಮ್ಮಂದಿರೊಬ್ಬರೊಬ್ಬರ ಕಡಿದು
ನಿರಪರಾಧಿಗಳಾದ ತಾಯ್ ಮಕ್ಕಳನು ಕೊಂದು
ಈ ಹೊಲ್ಲ ಯುದ್ಧ ನಡಸುತಿರೆ, ಪಾಪದ ಫಲಕೆ
ನಮ್ಮನೂ ಭಾಗಿ ಮಾಡಲು ಬಂದ ಭಾರತದ
ಅಣ್ಮರಿಗೆ ನೀನೊರೆದೆ: “ಸಲ್ಲದೀ ಭ್ರಾತೃವಧ;
ನಮ್ಮ ನೆರವಿದಕಿಲ್ಲ.”-ಇದನು ಸಾರುವ ಹಕ್ಕೆ
ನಾಡ ಬಿಡುಗಡೆಯೆಂದೆ-ಇದಕಾಯ್ತು ನಿನಗೆ ಸೆರೆ!
ಸತ್ಯದ ಅಹಿಂಸೆಯಾ ಸಂಗ್ರಾಮಕದುವೆ ಕರೆ!
(೧೯೪೨ರ ಆಗಸ್ಟಿನಲ್ಲಿ ಮಹಾತ್ಮ ಗಾಂಧಿಯವರು ಬಂಧನಕ್ಕೆ ಗುರಿಯಾದಾಗ)
*****