ರಂಗಸಿಂಹ ಆರ್ ನಾಗರತ್ನಮ್ಮ

ರಂಗಸಿಂಹ ಆರ್ ನಾಗರತ್ನಮ್ಮ

ಚಿತ್ರ: ಒನ್ ಇಂಡಿಯ ಕನ್ನಡ
ಚಿತ್ರ: ಒನ್ ಇಂಡಿಯ ಕನ್ನಡ

‘ಕಾವ್ಯೇಷು ನಾಟಕಂ ರಮ್ಯಂ’ ಅಂದಿದ್ದಾರೆ ಸದಭಿರುಚಿಯ ಹಿರಿಯರು, ನಾವು ಕಾವ್ಯವನ್ನು ಆಸ್ವಾದಿಸುತ್ತೇವೆ ಅಲ್ಲಿ ಕವಿ ಇರೋದಿಲ್ಲ. ಸಾಹಿತ್ಯವನ್ನು ಓದ್ತಾ ಮೈ ಮರಿತೀವಿ ಅಲ್ಲಿ ಸಾಹಿತಿ ಕಾಣೋದಿಲ್ಲ, ಆದರೆ ನೀವು ನಾಟಕವನ್ನು ಹೆಚ್ಚಾಗಿ ಓದೋದಿಲ್ಲ ಅದನ್ನು ನೋಡಿದರೇನೇ ಹೆಚ್ಚು ಮಜ. ನೀವು ನಾಟಕವನ್ನು ನೋಡೋವಾಗ ನಿಮ್ಮ ಮತ್ತು ಕಲಾವಿದರ ಮುಖಾ – ಮುಖಿಯಾಗುತ್ತದೆ. ಅವರ ವೇಷಭೂಷಣ, ಹಾಡುಗಾರಿಕೆ ನಟನೆಗಳಿಗೆ ನೀವು ಮಾರು ಹೋಗ್ತಿರ ಮಂತ್ರಮುಗ್ಧರಾಗ್ತಿರಾ ಉದ್ವೇಗಕ್ಕೆ ಒಳಗಾದಾಗ ಚಪ್ಪಾಳೆ ತಟ್ತಿರ ಕಣ್ಣೀರು ಹಾಕ್ತಿರಾ ಓಹೋ ಅಂತ ನಗ್ತಿರಾ ಅದರಿಂದಾಗಿ ಕಲಾವಿದ/ ಕಲಾವಿದೆ ಸ್ಪೂರ್ತಿಗೊಂಡು ಮತ್ತಷ್ಟು ಉತ್ತಮ ಅಭಿನಯ, ಇಂಪಾದ ಗಾಯನ ನಿಮಗೆ ಉಣಬಡಿಸಬಲ್ಲರು. ನೀವು “ಒನ್ಸ್‌ಮೋರ್” ಎಂದರೆ ಅವರೆಂದಿಗೂ ಸಿನಿಮಾದಂತೆ ‘ನೋಮೋರ್’ ಎನ್ನೋಲ್ಲ ಸೈಡ್ ವಿಂಗ್ಸ್‌ಗೆ ಹೋದರೂ ಮತ್ತೆ ಬಂದು ಹಾಡಿ ನಿಮ್ಮ ಮನ ತಣಿಸುವ ಮೂಲಕ ಗೌರವಿಸುತ್ತಾರೆ. ಇಂತಹ ವಿನಯ ಸಜ್ಜನಿಕೆ ಸಂಸ್ಕಾರ, ಸಂಸ್ಕೃತಿ ಇನ್ನೂ ಜೀವಂತ ಉಳಿದಿರೋದು ನಾಟಕ ಕಲಾವಿದರಲ್ಲಿ ಮಾತ್ರ ಅನ್ನೋದು ಅತ್ಯಂತ ಹೆಮ್ಮೆಯ ವಿಷಯ.

ಜೀವನವೇ ಒಂದು ನಾಟಕರಂಗ ಅಂತಾರೆ ನಾವೆಲ್ಲ ಅಲ್ಲಿನ ಪಾತ್ರಧಾರಿಗಳು. ನಾಟಕರಂಗದಲ್ಲಿ ಸುಧಾರಿಸಿಕೊಳ್ಳೋಕೆ ಸೈಡ್ ವಿಂಗ್ಸ್ ಉಂಟು. ಜೀವನದಲ್ಲಿ ಮಾತ್ರ ಅಂಕದ ಪರದೆ ಬೀಳೋವರೆಗೂ ನಮ್ಮ ನಾಟಕ ಮುಗಿಯಂಗಿಲ್ಲ ! ಜೀವನ ನಾಟಕ ಸೂತ್ರಧಾರಿ ಭಗವಂತ ಅಂತಾರೆ, ಯಾಕೆಂದರೆ ಭಗವಂತನು ನಾಟಕ ಆಡಿದವನೆ. ಸಮುದ್ರಮಥನದ ಕಾಲದಲ್ಲಿ ಮೋಹಿನಿಯಾಗಿ ದೇವತೆಗಳಿಗೆ ಮಾತ್ರ ಅಮೃತ ಹಂಚಿದ ಕಿಲಾಡಿ. ಭಸ್ಮಾಸುರನನ್ನು ಸಂಹರಿಸಲು ಪುನಃ ಮೋಹಿನಿಯಾಗಿ ನಾಟ್ಯವಾಡಿದ ಚತುರ. ಅವನು ಕೂಡ ಜಗನಾಟಕ ಸೂತ್ರಧಾರಿಯೆ. ಅವನಿಂದ ಬಂದ ಕಲೆ ಶ್ರೇಷ್ಠಂ, ರಮ್ಯಂ ಅಂತಾರೆ. ಎಷ್ಟೆಂದರೂ ಸಿನಿಮ ರೀಲು ನಾಟಕ ರಿಯಲು, ಸಿನಿಮಾದಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳಲು ಟೇಕ್-ರೀಟೇಕ್ ಡಬ್ಬಿಂಗ್‌ನಲ್ಲಿ ಅವಕಾಶಗಳಿರುತ್ತದೆ. ಡ್ಯೂಪ್ ಕೂಡ ಉಂಟು. ಒಟ್ಟಿಗೆ ಎಲ್ಲಾ ಡೈಲಾಗುಗಳನ್ನು ಒಂದೇ ಉಸುರಿಗೆ ಹೇಳುವಂತಿಲ್ಲ. ಅದರೆ ನಾಟಕದಲ್ಲಿ ನೋ ಸೆಕೆಂಡ್ ಛಾನ್ಸ್, ನಟ ರಂಗದ ಮೇಲೆ ಬಂದರೆ ಮುಗಿಯಿತು ಅವನ ಯಶಸ್ಸು ಅಪಯಶಸ್ಸು ಹಣೆಬರಹ ರಂಗದ ಮೇಲೆ ತೀರ್ಮಾನವಾಗಿಬಿಡುತ್ತೆ. ಮೈಲುದ್ದದ ಡೈಲಾಗುಗಳನ್ನು ನಟ ಚಾಚೂ ತಪ್ಪದೆ ಹೇಳುತ್ತಾ ಅಭಿನಯಿಸುವುದನ್ನು ನೋಡುವುದೇ ಒಂದು ಭಾಗ್ಯ, ಆ ಕಣ್ಣೋಟ ಅಬ್ಬರದ ದನಿ ಹೆಜ್ಜೆ ಇಡುವ ಠೀವಿ ಮೀಸೆ ತೀಡುವ ವೈಖರಿ, ಸಿಂಹನಡಿಗೆ, ವೇಷಭೂಷಣ, ಗದೆ ಎತ್ತುವ ವೈಖರಿ ಘರ್ಜನೆಯ ಗತ್ತೇನು! ಪೌರಾಣಿಕ ಪಾತ್ರಗಳಲ್ಲಂತೂ ಕಲಾವಿದನಾದವನು ಪ್ರೇಕ್ಷಕನನ್ನು ಮೈಮರೆಯುವಂತೆ ಮಾಡಿಬಿಡುತ್ತಾನೆ. ಜೊತೆಗೆ ತಾನೂ ಮೈಮರೆಯುತ್ತಾನೆ. ಮೈಮರೆತರೂ ಪಾತ್ರದಲ್ಲಿನ ತಲ್ಲೀನತೆಯನ್ನು ತನ್ನಲ್ಲೇ ಉಳಿಸಿಕೊಂಡು ವಿಜೃಂಬಿಸುವ ಕಲಾಗಾರಿಕೆಯೇ ನಾಟಕ ಕಲಾವಿದನ ಅಳಿಯದ ಸಂಪತ್ತು ಆ ಸಂಪತ್ತಿನ ಒಡತಿ ಅದ್ಭುತ ರಂಗನಟಿ ಆರ್. ನಾಗರತ್ನಮ್ಮ ಈವತ್ತು ‘ಬಾ ಅಥಿತಿ’ ಕಾರ್ಯಕ್ರಮದ ಅಥಿತಿಯಾಗಿದ್ದಾರೆ. ಆರ್. ನಾಗರತ್ನಮ್ಮ ಅಂದರೆ ಯಾರಿಗಳೂ ಅಷ್ಟಾಗಿ ಗೊತಾಗೋದಿಲ್ಲ ಬಿಡ್ರಿ. ಸ್ತ್ರೀ ನಾಟಕ ಮಂಡಳಿಯ ನಾಗರತ್ನಮ್ಮ ಅಂದರೇನೇ ಜನ ‘ಓಹ್’ ಎಂದು ಬಾಯ್ದೆರೆಯುತ್ತಾರೆ. ಅದೇ ಅವರ ಡಬ್ಬಲ್ ಡಿಗ್ರಿ.

ನಾಟಕರಂಗ ಈವತ್ತು ಒಂದಿಷ್ಟು ಕಳೆಗುಂದಿರಬಹುದು ಆದರೆ ನಾಟಕರಂಗ ಸಿನಿಮಾರಂಗಕ್ಕೆ ಬೇಕಾದ ಕಲಾಪುರುಷ ಡಾ|| ರಾಜ್ ರಂಗಕಲಾವಿದರೆ ಅನ್ನೋದು ಹೆಗ್ಗಳಿಕೆಯ ವಿಷಯವಲ್ಲವೆ. ಅಂತೆಯೇ ಹಾಸ್ಯಬ್ರಹ್ಮ ನರಸಿಂಹರಾಜು, ಬಾಲಣ್ಣ, ಅಯ್ಯರ್, ಬಿ.ರೋಜಾದೇವಿ, ಲೀಲಾವತಿ, ಪಂಡರಿಬಾಯಿ, ಮುಸುರಿ ಎಲ್ಲಾ ನಾಟಕರಂಗದಿಂದ ಸಿನಿಮಾಕ್ಕೆ ಹೈಜಂಪ್ ಮಾಡಿದವರೆ. ಆದರೆ ನಮ್ಮ ನಾಗರತ್ನಮ್ಮ ಸಿನಿಮಾಕ್ಕೆ ಹಾರಿದರೂ ನಾಟಕ ಬಿಡದೆ ರಂಗಕಲೆಗೆ ಬಾಳನ್ನು ಮುಡುಪಾಗಿಟ್ಟಿದ್ದು ರಂಗಭೂಮಿಯ ಪುಣ್ಯವೆಂದರೆ ಉತ್ಪ್ರೇಕ್ಷೆಯಲ್ಲ. ನಾಗರತ್ನಮ್ಮ ಸಿನಿಮಾ ನಟಿಯಾಗಿದ್ದಿದ್ದರೆ ರಂಗಭೂಮಿಗೆ ನಷ್ಟವಾಗುತ್ತಿತ್ತು ಜೊತೆಗೆ ಇಷ್ಟು ಹೊತ್ತಿಗೆ ಸಿನಿಮಾರಂಗದಲ್ಲಿ ಸವಕಲು ನಾಣ್ಯವಾಗುತ್ತಿದ್ದರೇನೋ. ಯಾಕೆಂದರೆ ಆಜಗತ್ತೆ ಹಾಗಿದೆ. ನಾಟಕರಂಗದಂತೆ ಒಬ್ಬರನ್ನೇ ನಂಬಿ ಬಾಳುವ ಗರತಿಯಂತಲ್ಲ. ಗೆದ್ದ ಎತ್ತಿನ ಬಾಲ ಬಡಿವ ಅತ್ಯಂತ ಸ್ವಾರ್ಥಿಗಳ ವ್ಯಾಪಾರಿಗಳ ಪ್ರಚಾರಪ್ರಿಯರ ಜಗತ್ತು. ಆದರೆ ನಾಗರತ್ನಮ್ಮ ಇಂದಿಗೂ ರಂಗಭೂಮಿಯ ಎವರ್ ಗ್ರೀನ್ ಸ್ಟಾರ್ ಸ್ಟೇಜ್ ಟೈಗರ್.

ನಾಗರತ್ನಮ್ಮ ತಮ್ಮ ಅಂಗಸೌಷ್ಠವಕ್ಕೆ ಒಪ್ಪುವ ಒಳ್ಳೆಯ ಸ್ತ್ರೀ ಪಾತ್ರಗಳನ್ನೇ ಮಾಡ್ತಾ ಇದ್ದವರು. ಚಿಕ್ಕಂದಿನಲ್ಲಿ ನಾನವರ ಸ್ತ್ರೀ ಪಾತ್ರಗಳನ್ನು ನೋಡಿದ್ದೇನೆ. ಮಾಸ್ಟರ್ ಹಿರಣ್ಣಯ್ಯನವರ ಕಂಪನಿಯಲ್ಲಿ ‘ದೇವದಾಸಿ’ ಹೆಸರಾಂತ ನಾಟಕ ಅದರಲ್ಲಿ ಶೇಷಾಚಾರ್ ವಸಂತಶೇಖರನ ಪಾತ್ರ ಮಾಡಿದರೆ ಇವರದ್ದು ವಿಮಲೆ ಪಾತ್ರ, ಶೇಷಾಚಾರ್ ನಂತರ ವಸಂತ ಶೇಖರನ ಪಾತ್ರದಲ್ಲಿ (ಹುಚ್ಚ) ಖ್ಯಾತರಾದವರು ಬಿ. ಲಕ್ಷ್ಮಯ್ಯ ಚಿತ್ರದುರ್ಗದವರು. ಲಕ್ಷ್ಮಯ್ಯನವರೊಂದಿಗೆ ಸಹ ನಾಗರತ್ನಮ್ಮ ಅಭಿನಯಿಸಿದ್ದುಂಟು. ನಾನು ಆ ನಾಟಕಗಳನ್ನು ನನ್ನಮ್ಮನ ಪಕ್ಕ ಕೂತು ನೋಡಿದ ಮಾಸಲು ಮಾಸಲು ನೆನಪು. ಬಿ. ಲಕ್ಷ್ಮಯ್ಯ ನಮ್ಮ ತಂದೆ ಹೀಗಾಗಿ ನನ್ನ ಮೈನಲ್ಲಿ ಕಲಾವಿದನ ರಕ್ತ ಹರೀತಿದೆ ಕಂಪನಿ ಮನೆಯ ಊಟದ ಋಣ ಇದೆ. ವಯಸ್ಸಿನಲ್ಲಿ ನಾಗರತ್ನ ಲಕ್ಷಣವಾಗಿದ್ದರು, ತೆಳ್ಳಗೆ ಬಳ್ಳಿಯಂತಿದ್ದರು ಎಂದರೆ ನೀವೀಗ ನಂಬೋದು ಕಷ್ಟ. ಆಕಾಲದಲ್ಲಿ ಗಂಡಸರೇ ಹೆಂಗಸರ ಪಾತ್ರ ಮಾಡುತ್ತಿದ್ದದ್ದೂ ಉಂಟು. ಹೆಂಗಸರು ನಾಟಕ ಕಂಪನಿ ಸೇರಲು ಅಂಜುತ್ತಿದ್ದರು. ನಮ್ಮ ನಾಗರತ್ನಮ್ಮನಿಗೆ ಇಷ್ಟವಾದ ಪಾತ್ರಗಳು ದೊರೆಯಲಿಲ್ಲವೋ ಅಥವಾ ಹೊಸತೇನನ್ನಾದರೂ ಮಾಡಿ ತೋರಿಸಬೇಕೆಂಬ ಹಂಬಲವೋ ! ಎಲ್ಲರದ್ದೂ ಒಂದು ತೆರನಾದ ಕನಸಾದರೆ ಅವರ ಕನಸೇ ಭಿನ್ನ ಸ್ತ್ರೀಯರೇ ಪುರುಷ ಪಾತ್ರಗಳನ್ನು ಮಾಡಿದರೆ ಹೇಗೆ? ಸ್ತ್ರೀಯರೇ ಒಂದು ನಾಟಕ ಕಂಪನಿ ಕಟ್ಟಿ ನಡೆಸಬಾರದೇಕೆಂಬ ಮಹಾಕನಸು ಅವರನ್ನು ಅದೇಕೆ ಕಾಡಿತೋ ನಾಟಕರಂಗಕ್ಕೆ ಇದೊಂದು ಹೊಸ ತಿರುವು (Turning point) ನೀಡಿತು. ಈಯಮ್ಮನಿಗೆಲ್ಲೋ ಹುಚ್ಚು ಅಂದವರುಂಟು. ಆದರೆ ಛಲಬಿಡದ ತ್ರಿವಿಕ್ರಮ ನಾಗರತ್ನಮ್ಮ ಸ್ತ್ರೀ ನಾಟಕ ಮಂಡಳಿ ಮಾಡಲು ನಿರ್ಧರಿಸಿಯೇ ಬಿಟ್ಟರು. ಅಂಬುಜಮ್ಮನಂತಹ ಹಿರಿಯ ಕಲಾವಿದೆಯ ಅದಮ್ಯ ಪ್ರೋತ್ಸಾಹವೂ ಸಿಕ್ಕಿತು. ತಂಗಿ ಮಂಜುಳ ಸಂಬಂಧಿ ಪುಟ್ಟಮ್ಮ ಎಚ್.ಪಿ. ಸರೋಜ, ಕಲಾವತಿ, ಪ್ರೇಮ ಮುಂತಾದ ಹುಡುಗಿಯರನ್ನೆಲ್ಲಾ ಕಲೆ ಹಾಕಿದ ನಾಗರತ್ನಮ್ಮ ಕೈಗೆತ್ತಿಕೊಂಡಿದ್ದು ಮೊದಲಿಗೆ ಪುರುಷ ಪ್ರಧಾನ ಪೌರುಷ ಪ್ರಧಾನ ಪೌರಾಣಿಕ ನಾಟಕಗಳನ್ನು ಎಂಬುದು ಉಲ್ಲೇಖನಾರ್ಹ. ವೀರ, ಶೌರ್ಯ, ಪರಾಕ್ರಮಗಳನ್ನು ತೆರೆಯ ಮೇಲೆ ತರಬೇಕು, ನವರಸಗಳನ್ನು ಚೆಲ್ಲಿ ಪ್ರೇಕ್ಷಕರನ್ನು ಸೆರೆಹಿಡಿಯಬೇಕು. ಇದೇನು ಸಾಮಾನ್ಯ ಸಂಗತಿಯೇ? ಆ ಕಾಲಕ್ಕೆ ಪೌರಾಣಿಕ ನಾಟಕಗಳನ್ನು ಆಡುವವರ ಸಂಖ್ಯೆ ಕ್ಷೀಣಿಸಿತು. ಗುಬ್ಬಿ ಕಂಪನಿಯವರು ಸಹ ಸಾಮಾಜಿಕ ನಾಟಕಗಳತ್ತ ವಾಲಿದ್ದರು. ಭೀಮ, ಕಂಸ, ರಾವಣ, ಹಿರಣ್ಯಕಶಿಪುವಿನಂತಹ ಪಾತ್ರಗಳನ್ನು ಮಾಡುತ್ತಿದ್ದ ನಟ ಭಯಂಕರ ಗಂಗಾಧರ ರಾಯರು. ಸುಬ್ಬಯ್ಯನಾಯ್ಡು, ಕೊಟ್ಟೂರಪ್ಪ, ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ನೇಪಥ್ಯಕ್ಕೆ ಸರಿದಿದ್ದರು. ಯಾರಲ್ಲೂ ಪೌರಾಣಿಕ ನಾಟಕಗಳನಾಡುವ ಪೌರುಷವೇ ಇರಲಿಲ್ಲ. ಮುಖ್ಯವಾಗಿ ಶರೀರ ಶಾರೀರವೂ ಇರಲಿಲ್ಲ, ನೀವೇ ಊಹಿಸಿಕೊಳ್ಳಿ ಮಾ|| ಹಿರಣ್ಣಯ್ಯಂಗೆ ಮೀಸೆ ಹಚ್ಚಿ ಗಧೆ ಕೊಟ್ಟರೆ ಹೇಗಿದ್ದಾರು ? ಮುಸುರಿ ಕೃಷ್ಣಮೂರ್ತಿಗೆ ರಾಜನ ಪಾರ್ಟು ಹಾಕಿ ಕೈಗೆ ಕತ್ತಿ ಕೊಟ್ಟರೆ ಹೇಗೆ ಕಂಡಾರು ? ಗಂಡಸರಿಗೇ ಅಸಾಧ್ಯವಾದ ಗಂಡು ಪಾತ್ರಗಳನ್ನೇ ನಾಗರತ್ನಮ್ಮ ಆಯ್ದುಕೊಂಡರು. ತಮ್ಮ ಆಕಾರ ಮಟ್ಟಸವಾದ ಕಂಠಸಿರಿಗೆ ಸರಿಯಾಗಿ ಭೀಮ ಕಂಸ ರಾವಣನನ್ನೇ ಮೈ ಮನಗಳಲ್ಲಿ ಆವಾಹನೆ ಮಾಡಿಕೊಂಡರು. ರಂಗದ ಮೇಲೆ ಬಂದರು ಗದೆ ಬೀಸಿ ಆರ್ಭಟಿಸಿದರು. ಹಲವೊಮ್ಮೆ ಸಿಡಿಲಾಗಿ ಸಿಡಿದರು. ಜನ ಹುಚ್ಚೆದ್ದು ಚಪಾಳೆ ತಟ್ಟಿತು. ನಾಟಕದಲ್ಲಿ ಮಾತ್ರವಲ್ಲ ನಾಗರತ್ನಮ್ಮ ನಿಜ ಜೀವನದಲ್ಲೂ ಗಂಡಾದರು. ಸ್ತ್ರೀ ನಾಟಕ ಮಂಡಳಿ ಕಟ್ಟಿ ನಡೆಸಿದರು, ಹಣ ಕೀರ್ತಿಯ ಕೊಳ್ಳೆ ಹೊಡೆದರು. ಕಷ್ಟನಷ್ಟಗಳ ಸವಿಯುಂಡರು ನಾಟಕ ಕಲಾವಿದ ರಂಗದ ಮೇಲಷ್ಟೆ ಸುಖಿ. ರಾತ್ರಿ ರಾಜಾಧಿರಾಜನಾಗಿ ಕತ್ತಲಲ್ಲಿ ಮೆರೆವ ರಂಗನಟ ಬೆಳಗಿನ ಬೆಳಕಲ್ಲಿ ನೋಡಬೇಕು. ಕೊಳಕು ಬಟ್ಟೆಯಲ್ಲಿ ಮೋಟು ಬೀಡಿ ಸೇದುತ್ತಾ ಕುಕ್ಕರಗಾಲಲ್ಲಿ ಕೂತು ಕೆಮ್ಮಿ ಕ್ಯಾಕರಿಸುವ ಪರಿಯೇ ಅವರ ಜೀವನದ ದಾರಿದ್ರವನ್ನು ದರ್ಶಿಸಿಬಿಡುತ್ತದೆ. ನಾಗರತ್ನಮ್ಮ ಕೂಡ ಸುಖದೊಂದಿಗೆ ಸಂಕಷ್ಟಗಳನ್ನೂ ಸಮನಾಗಿ ಉಂಡಜೀವ ಅರಗಿಸಿಕೊಂಡ ಮಹಾ ಚೇತನ.

ನಾಗರತ್ನಮ್ಮನ ಪತಿ ಕೂಡ ಪ್ರಖ್ಯಾತ ನಟರು. ಬಿ. ಪಾರ್ಥಸಾರಥಿ ಅಂತ ಮಾಸ್ಟರ್ ಹಿರಣ್ಣಯ್ಯನವರ ಕಂಪನಿಯಲ್ಲಿ ಪ್ರಮುಖ ಕಲಾವಿದರು. ಪ್ರಾಕ್ಟೀಸಿಂಗ್ ಮೇನೆಜರ್ ರಂಗಕರ್ಮಿ ಏನಲ್ಲಾ. ಪಾರ್ಥಸಾರಥಿಯಂತಹ ಅಪರೂಪದ ಕಲಾವಿದ ಗಂಡನೊಡನೆ ಆಯಮ್ಮ ಕಳೆದದ್ದಾರೂ ಎಂತಹ ದಿನಗಳು ಅಂತೀರಿ. ಒಬ್ಬೊಬ್ಬರದು ಒಂದೊಂದು ಕಂಪನಿ. ತಮ್ಮದೇ ಅಭಿರುಚಿ ಆತ್ಮಾಭಿಮಾನ ತೀರ್ಮಾನಗಳು. ಗಂಡಹೆಂಡಿರಾಗಿ ಇವರು ಒಂದೆಡೆ ಸೇರಲು ಕಷ್ಟಸುಖ ಹಂಚಿಕೊಳ್ಳಲೂ ಬಿಡುವಿಲ್ಲದಷ್ಟು ಬಿಜಿ ದಿನಗಳವು. ಅದರಲ್ಲೇ ಭೇಟಿ ಸುಖ ಸಂಸಾರ ಮಕ್ಕಳು ಮರಿಗಳಾದವು. ಇಬ್ಬರೂ ಜೊತೆಯಾಗಿರುವ ದಿನಗಳು ಬಂದಾಗ ಸಾವಿನ ಸಾರಥಿಯಾಗಿ ಪಾರ್ಥಸಾರಥಿ ಇಹಲೋಕವನ್ನೇ ತ್ಯಜಿಸಿದರು. ಇದು ನಾಟಕದವರ ಪಾಡು ನೋವಿನ ಹಾಡು.

ನಾಗರತ್ನಮ್ಮನವರೇ ಒಂದೆಡೆ ಬರೆದುಕೊಂಡಿದ್ದಾರೆ. ಅವರು ತುಂಬು ಗರ್ಭಿಣಿ ಹೊಟ್ಟೆಕಾಣದಂತೆ ಬಟ್ಟೆ ಸುತ್ತಿಕೊಂಡು ನಟಿಸಬೇಕು. ಹಿಡಿ ಅನ್ನಕ್ಕಾಗಿ ಮಗು ಚಿಕ್ಕದಿರುವಾಗಲೆ ರಂಗಭೂಮಿಯಲ್ಲಿ ದುಡಿಯಲೇಬೇಕು. ನಾಟಕ ನಡೆವಾಗ ಕಂಪನಿ ಹುಡುಗರು ಮಗನನ್ನೇನೋ ನೋಡಿಕೊಳ್ಳುತ್ತಿದ್ದರು. ಒ೦ದು ದಿನ ಮಗು ರಚ್ಚೆ ಹಿಡಿದು ಜೋರಾಗಿ ಅಳುತ್ತಿದೆ ರಂಗಭೂಮಿಯ ಮೇಲಿರುವ ನಾಗರತ್ನಮ್ಮನ ಕರುಳು ಮಗುವಿನತ್ತ ಹಿಂಡಿದರೆ ಒಳಗಿನ ಕಲಾವಿದೆ ರಂಗಮಧ್ಯದಲ್ಲೇ ಕಟ್ಟಿಹಾಕಿಬಿಡುವಷ್ಟು ಶಕ್ತಳು. ಗೆದ್ದದ್ದು ತಾಯಿಯಲ್ಲ – ಕಲಾವಿದೆ. ಮಗುವಿಗೆ ಹಾಲುಣಿಸಲು ಬಿಡುವಿಲ್ಲ. ಗಂಡುವೇಷ ಬೇರೆ. ಎದೆಕವಚ ಮೀಸೆ, ಕಿರೀಟಗಳು ಬೇರೆ. ಆದರೇನು ನಾಟಕ ಮುಗಿಯುವವರೆಗೂ ಮಗು ಚೀರಿ ಚೀರಿ ಅಳುವುದನ್ನು ಕೇಳುತ್ತಲೇ ನಾಗರತ್ನಮ್ಮ ಹಾಡಿದರು ಕುಣಿದರು ಆರ್ಭಟಿಸಿದರು. ನಂತರವೇ ತಾಯಿಯಾಗಿ ಈಚೆ ಬಂದರು. ಮಗುವನ್ನಪ್ಪಿ ಮುದ್ದುಗರೆದರು ಕ್ಷೀರಪಾನ ಮಾಡಿಸಿದರು. ಮಗುವೇನೋ ಅಳುವುದನ್ನು ನಿಲ್ಲಿಸಿತು. ಆದರೆ ತನ್ನ ದುರ್ದೈವಕ್ಕೆ ತನ್ನ ಮಗು ಪಡೆದು ಬಂದ ಭಾಗ್ಯಕ್ಕೆ ಮರುಗಿ ಮಗುವಿನಂತೆ ಬಿಕ್ಕಿ ಬಿಕ್ಕಿ ಅತ್ತರು. ಮಗುವಿಗೆ ಕಾಯಿಲೆ. ಆ ಕಾಲದಲ್ಲಿ ಸರಿಯಾದ ವೈದ್ಯರಿಲ್ಲ ತೋರಿಸಲು ಕೈಲಿ ಕಾಸಿಲ್ಲ ಬಿಡುವಂತೂ ಮೊದಲೇಯಿಲ್ಲ. ಮಗು ತವರೂರಲ್ಲಿ ತಾಯಿ ರಂಗಭೂಮಿಯ ತೆಪ್ಪದಲ್ಲಿ.

ಚಾಮರಾಜನಗರದ ಕ್ಯಾಂಪ್. ದೆವ್ವದ ಮನೆಯೇ ಕಂಪನಿ ಮನೆ, ನಾಟಕದವರಿಗೆ ಅಂತಹ ತಿರಸ್ಕೃತ ಮನೆಗಳೇ ಅಂದು ಲಭ್ಯ, ಮಗು ತೊಡೆಯ ಮೇಲಿಂದ ಬಿದ್ದಿದ್ದೇ ನೆಪ, ಮಗು ಅತ್ತಿದ್ದೂ ಅತ್ತಿದ್ದೇ ಬರುಬರುತ್ತ ಹೊರಳಲೂ, ನರಳಲೂ ಆಗದು, ಮಗುವಿನ ಬಾಧೆ ಅದರ ಕಾಯಿಲೆ ಅರ್ಥವಾಗದಂತದ್ದು ಮಗುವಿನೊಂದಿಗೆ ಮೈಸೂರಿಗೆ ಹೋಗಲೇಬೇಕಾಯಿತು. ಹೋದರೂ ಅಲ್ಲಿ ನಿಲುವಂತಿಲ್ಲ. ಒಂದು ದಿನ ನಾಟಕ ನಿಂತರೆ ಉಪವಾಸ, ವನವಾಸ – ಎಲ್ಲರಿಗೂ. ಒಂದು ಕಡೆ ಕರ್ತವ್ಯದ ಕರೆ ಇನ್ನೊಂದೆಡೆ ಕರುಳಿನ ಕರೆ ಕೊನೆಗೆ ಮಗು ಪೂರ್ಣಿಮ ಕಣ್ಣು ಮುಚ್ಚಿತು. ನಾಗರತ್ನಮ್ಮ ಅತ್ತು ಅತ್ತು ಬರಿದಾದರು ಮತ್ತೆ ಸಂಜೆಗಾಗಲೇ ನಾಟಕಕ್ಕೆ ಅಣಿಯಾದರು. That Is ಸ್ತ್ರೀ ನಾಟಕ ಮಂಡಳಿ ಪುರುಷಸಿಂಹ ಆರ್. ನಾಗರತ್ನಮ್ಮ.

ನಾಗರತ್ನ ನಡು ಪ್ರಾಯದಲ್ಲೇ ಗಂಡನನ್ನು ಕಳೆದುಕೊಂಡವರು. ಏನನ್ನು ಕಳೆದುಕೊಂಡರೂ ಎದೆಗಾರಿಕೆಯನಾಗಲಿ ಅಭಿನಯ ಸಾಮರ್ಥ್ಯವನಾಗಲಿ ಕಳೆದುಕೊಳ್ಳದ ಸ್ತ್ರೀ ರತ್ನ ಗಂಡ ಸತ್ತು ವೈಧವ್ಯ ಪ್ರಾಪ್ತಿಯಾದಾಗ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬದಲ್ಲಿ ಎಷ್ಟೊಂದು ಆಚಾರ – ವಿಚಾರಗಳೆಂಬುದು ಸರ್ವವೇದ್ಯ. ಒಂದು ವರ್ಷವಿಡೀ ಯಾರಿಗೂ ಮುಖ ತೋರದೆ ಒಳ ಸೇರಿದರೆ ಹೊಟ್ಟೆ ಪಾಡಿನ ಗತಿಯೇನು? ತಮ್ಮೊಬ್ಬರ ಪಾಡಾಗಿದ್ದರೆ ಉಪವಾಸವಿದ್ದು ಬಿಡುತ್ತಿದ್ದರೇನೋ ಅವರಿಗೆ ಉಪವಾಸ ಹೊಸತಲ್ಲ ಆದರೆ ಕಂಪನಿಯ ಅರವತ್ತು ಕಲಾವಿದರ ಹೊಟ್ಟೆಪಾಡು. ಪಾರ್ಥಸಾರಥಿಯವರ ಜೀವನಯಾತ್ರೆ ಮುಗಿದು ಮಾಸ ಆರುವುದರಲ್ಲೇ ಕಾಲಯಾತ್ರೆ ಆರಂಭಿಸಿದ ಧೀಮಂತೆ ಆರ್. ನಾಗರತ್ನಮ್ಮ. ಗಂಡು ಪಾತ್ರ ಮಾಡುವುದಷ್ಟೇ ಅಲ್ಲ ಗಂಡಿನಂತೆ ದುಡಿದು ಮನೆ ಮಕ್ಕಳನ್ನು ಸಾಕುವ ಹೊಣೆಗಾರಿಕೆಯನ್ನೂ ಹೊತ್ತರು. ಎಲ್ಲರನ್ನೂ ಒಂದು ನೆಲೆಗೆ ತಂದರು. ಭೀಮ, ರಾವಣ, ಕಂಸನಾಗಿ ವಿಜೃಂಭಿಸಿ ನಾಟಕರಂಗದಲ್ಲಿಯೇ ಹೊಸ ಶಾಖೆಯನ್ನು ಆರಂಭಿಸಿ ಅರವತ್ತು ವರ್ಷಗಳಾದರೂ ಯಶಸ್ವಿಯಾಗಿ ದುಡಿದ ಮಹಾನ್ ಜೀವ. ಚಾಮುಂಡೇಶ್ವರಿ ಕಂಪನಿಗೆ ತಮ್ಮ ೧೪ನೇ ವಯಸಿನಲ್ಲೇ ಪಾದಾರ್ಪಣೆ ಮಾಡಿದ ಅಭಿಜಾತ ಕಲಾವಿದೆ. ಕೃಷ್ಣಗಾರುಡಿ, ಕೃಷ್ಣಲೀಲೆ ನಾಟಕಗಳನ್ನು ನೋಡಿದವರಿಗೆ ನಾಗರತ್ನಮ್ಮನವರ ಅಭಿನಯದ ಬಗ್ಗೆ ಹೆಚ್ಚು ಬಣ್ಣಿಸುವುದು ಅನಗತ್ಯ ಕಸರತ್ತಷ್ಟೆ. ಅವರ ರಂಗದ ಮೇಲಿನ ನಡಿಗೆ ಮದಗಜವನ್ನು ನೆನಪಿಗೆ ತಂದರೆ ಕಣ್ಣೋಟದಲ್ಲಿ ಮಿಂಚಿನ ಸೆಳೆತ, ಹಾವಭಾವದಲ್ಲಿ ಕಡಲಲೆಯ ಭೋರ್ಗರೆತ. ಧ್ವನಿಯಲ್ಲೋ ಸಿಡಿಲಿನ ಮೊರೆತ, ಆಂಗಿಕ ಅಭಿನಯದಲ್ಲಂತೂ ಗಂಡು ನಾಚುವಷ್ಟು ಅದ್ಭುತ. ನಾಗರತ್ನಮ್ಮನವರ ನಟನಾ ಕೌಶಲ್ಯವನ್ನು ಕಂಡು ನಟಸಾರ್ವಭೌಮ ಡಾ||ರಾಜ್ ತಮಗೆ ತಮ್ಮ ಅಪ್ಪಾಜಿಯವರ ಜ್ಞಾಪಕ ಬರುತ್ತೆ ಅಂದಿದ್ದಾರೆ. ಇದಕ್ಕಿಂತ ಪ್ರಶಸ್ತಿ ಬೇಕೇ ? ಹಾಗಂತ ನಾಗರತ್ನಮ್ಮನಿಗೆ ಬಂದ ಪ್ರಶಸ್ತಿಗಳಿಗೇನು ಬರವಿಲ್ಲ. ೧೯೭೮ರಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಗೌರವ ೧೯೮೬ರಲ್ಲಿ ರಾಜ್ಯೋತ್ಸವ ಪ್ರಶಸ್ತಿ ಮರುವರ್ಷವೇ ರಾಜ್ಯ ಅಕಾಡೆಮಿಯಿಂದ ಅತ್ಯುತ್ತಮ ನಟಿ ಎಂಬ ಪುರಸ್ಕಾರ ೧೯೭೩ರಲ್ಲಿ ಕೇಂದ್ರ ಸಂಗೀತ ನಾಟಕ ಅಕೆಡೆಮಿ ಗೌರವ ಭಾರತ ಮಟ್ಟದ ಪ್ರಶಸ್ತಿ, ಕೆ.ವಿ. ಶಂಕರೇಗೌಡ ಪ್ರಶಸ್ತಿ, ಕಳೆದ ವರ್ಷ ಗುಬ್ಬಿ ವೀರಣ್ಣ ಪ್ರಶಸ್ತಿ ಇತ್ಯಾದಿ ಪ್ರಶಸ್ತಿಗಳು ಅವರನ್ನರಸಿ ಬಂದಿವೆ. ನಾಗರತ್ನಮ್ಮನವರು ಅನೇಕ ಚಲನಚಿತ್ರಗಳಲ್ಲೂ ಪಾತ್ರೋಚಿತವಾಗಿ ಅಭಿನಯಿಸಿದ್ದಾರೆ. ಇಂತಹ ಅಪರೂಪದ ರಂಗಜೀವಿ ನೂರುಕಾಲ ಬಾಳಲಿ ಬಳಲಿರುವ ರಂಗಕ್ಕೆ ನವಚೈತನ್ಯ ತುಂಬಲಿ ಎಂದಾಶಿಸೋಣ.
(ನಾಟಕ ಅಕಾಡೆಮಿಯವರು ದಾವಣಗೆರೆಯಲ್ಲಿ ನಡೆಸುವ ’ಬಾ ಅತಿಥಿ’ ಕಾರ್ಯಕ್ರಮದಲ್ಲಿ ಕಲಾವಿದೆ ಆರ್.ನಾಗರತ್ನಮ್ಮನವರನ್ನು ಗೌರವಿಸಿದಾಗ ಮಾಡಿದ ಅಭಿನಂದನಾ ಭಾಷಣ)
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನಿವೃತ್ತಿ
Next post ಪ್ರಕೃತಿ

ಸಣ್ಣ ಕತೆ

  • ಇನ್ನೊಬ್ಬ

    ದೇವರ ವಿಷಯದಲ್ಲಿ ನಾನು ಅಗ್ನೋಸ್ಟಿಕನೂ ರಾಜಕೀಯದ ವಿಷಯದಲ್ಲಿ ಸೆಂಟ್ರಿಸ್ಟನೂ ಆಗಿದ್ದೇನೆ. ಇವೆರಡೂ ಅಪಾಯವಿಲ್ಲದ ನಿಲುವುಗಳೆಂಬುದು ನನಗೆ ಗೊತ್ತು. ಅಗ್ನೋಸ್ಟಿಕನಾಗಿದ್ದವನನ್ನು ಆಸ್ತಿಕರೂ ನಾಸ್ತಿಕರೊ ಒಂದೇ ತರಹ ಪ್ರೀತಿಯಿಂದ ಕಾಣುತ್ತಾರೆ,… Read more…

  • ಸಿಹಿಸುದ್ದಿ

    ಶ್ರೀನಿವಾಸ ದೇವಸ್ಥಾನದಲ್ಲಿ ಎರಡು ಪ್ರದಕ್ಷಿಣೆ ಹಾಕಿ ಮೂರನೇ ಪ್ರದಕ್ಷಿಣೆಗೆ ಹೊರಡುತ್ತಿದ್ದಂತೆಯೇ, ಯಾರೋ ಹಿಂದಿನಿಂದ "ಕಲ್ಯಾಣಿ," ಎಂದು ಕರೆದಂತಾಯಿತು. ಹಿಂತಿರುಗಿ ನೋಡಿದರೆ ಯಾರೋ ಮಧ್ಯ ವಯಸ್ಸಿನ ಮಹಿಳೆ ಬರುತ್ತಿದ್ದರು.… Read more…

  • ಪ್ರಕೃತಿಬಲ

    ಮಕರ ಸಂಕ್ರಮಣದ ಮಹೋತ್ಸವದ ದಿವಸವದು, ಸೂರ್ಯನಾರಾಯಣನು ಉತ್ತರಾಯಣನಾಗಿ ಸೃಷ್ಟಿಶೋಭೆಯೆಂಬ ಮಹಾಪ್ರದರ್ಶನ ಸಮಾರಂಭವನ್ನು ಜಗತ್ತಿಗೆ ತೋರಿಸುವನಾದನು. ಈ ಅದ್ವಿತೀಯವಾದ ಪ್ರದರ್ಶನವನ್ನು ನೋಡಲಪೇಕ್ಷಿಸುವವರು ಪರಮ ರಮಣೀಯವಾದ ಬೆಂಗಳೂರು ಪಟ್ಟಣಕ್ಕೆ ಬಂದು… Read more…

  • ಗೋಪಿ

    ವೆಂಕಪ್ಪನ ಜೊತೆಗೆ ಒಂದು ಆಕಳು ಇದ್ದೇ ಇದೆ. ಅವನ ಮನೆಯ ಮುಂದೆ ಯಾವಾಗಲೂ ಅದು ಜೋಲುಮೋರೆ ಹಾಕಿಕೊಂಡು ನಿಂತೇ ನಿಂತಿರುತ್ತದೆ. ದಾರಿಯಲ್ಲಿ ಹೋಗುತ್ತಿದ್ದವರನ್ನು ಮಿಕಿ ಮಿಕಿ ಕಣ್ಣು… Read more…

  • ಏಕಾಂತದ ಆಲಾಪ

    ಅಂದು ದಸರೆಯ ಮುನ್ನಾದಿನ ಮಕ್ಕಳಿಗೆಲ್ಲಾ ಶಾಲಾ ರಜೆ ದಿವಸಗಳು. ಅವಳು ಕಾತ್ಯಾಯನಿ, ಒಂದು ತಿಂಗಳಿಂದ ಆ ಪಟ್ಟಣದ ಪ್ರಸಿದ್ಧ ನೇತ್ರಾಲಯಕ್ಕೆ ಅಲೆಯುತ್ತಿದ್ದಾಳೆ. ಎರಡೂ ಕಣ್ಣುಗಳು ಪೊರೆಯಿಂದ ಮುಂದಾಗಿವೆ.… Read more…