ಕೆಸರಲಿ ಕಾಯುವ ಕಮಲದ ಕೆನ್ನೆಗೆ
ಬಾನಿನ ಹನಿಮುತ್ತು
ಮಿಸುಕಲು ಬಾರದ ಬೆಟ್ಟದ ನೆತ್ತಿಗು
ಹೂಬಿಸಿಲಿನ ಸುತ್ತು
ಬಿರಿಯಲು ಕಾದಿಹ ಮೊಗ್ಗಿನ ಬದಿಗೇ
ದುಂಬಿಯ ದನಿಹೊರಳು
ಕಾಯಿಯ ನೆತ್ತಿಯ ತಾಯಿಯ ಹಾಗೆ
ಕಾಯುವ ಎಲೆನೆರಳು
ಕಾಡಿನ ಮಡಿಲಲಿ ಸಾವಿರ ಜೀವ
ಎಲ್ಲಕು ಆಹಾರ!
ಯಾರೂ ಹಣಿಕದ ಜಾಗದಲ್ಲಿದ್ದರು
ಅವಕೂ ಸಿಂಗಾರ!
ನನಗೂ ನಿನಗೂ ಏನೋ ಗೊತ್ತಿದೆ
ಈ ಸೃಷ್ಟಿಯ ಮರ್ಮ?
ನೀರಿಗು ಗಾಳಿಗು ಬಾನಿನ ತಾರೆಗು
ಉಸಿರಾಗಿಹ ಧರ್ಮ?
*****
ಲಕ್ಷ್ಮೀನಾರಾಯಣ ಭಟ್ಟರು ಕನ್ನಡ ಕಾವ್ಯದ ಜೀವಂತಿಕೆಯನ್ನು ಹೆಚ್ಚಿಸುತ್ತ ಆಧುನಿಕ ಕನ್ನಡ ಕಾವ್ಯವನ್ನು ಬೆಳೆಸುತ್ತ ಬಂದಿರುವ ಪ್ರಮುಖ ಕವಿಗಳಲ್ಲಿ ಒಬ್ಬರು. ಅವರ ಅನುವಾದಗಳು ಕನ್ನಡ ಕಾವ್ಯಕ್ಕೆ ಕೊಟ್ಟ ಬೆಲೆಬಾಳುವ ಉಡುಗೊರೆಗಳು ಮಾತ್ರವಾಗಿರದೆ ಸ್ವಂತಕ್ಕೆ ಪಡೆದ ರಕ್ತದಾನವೂ ಆಗಿದೆ. ಸ್ವಂತ ಪ್ರತಿಭೆ, ಶ್ರೇಷ್ಠಕವಿಗಳ ಆಪ್ತ ಅಧ್ಯಯನ ಎರಡೂ ಅವರನ್ನೂ ಎತ್ತರಕ್ಕೆ ಹತ್ತಿಸಿವೆ. ಅಧ್ಯಯನ, ಚಿಂತನೆ ಇವು ಅವರಲ್ಲಿ ಹಾಸು ಹೊಕ್ಕಾಗಿ ಒಂದನ್ನು ಮತ್ತೊಂದು ಬಲಗೊಳಿಸುತ್ತ ಬಂದಿವೆ.