ಬಿಸಿಲು ಸುಟ್ಬು
ಬಿರುಕು ಬಿಟ್ಟು
ಮಳೆಯ ನೀರನೆ ಕುಡಿದು
ಹಸಿರು ತೊಟ್ಟ
ಕಲ್ಲುಬೆಟ್ಟ ನನ್ನಪ್ಪ

ಒಡಲು ಮೆಟ್ಟಿ
ಸುತ್ತುಗಟ್ಟಿ ಮೇಯುವ
ದನ ಕರು ಕುರಿಗಳಿಗೆ
ಹಸಿರು ಹುಲ್ಲು ಕೊಟ್ಟ
ಕಲ್ಲುಬೆಟ್ಟ ನನ್ನಪ್ಪ

ತೊಡೆಯ ಸಂದಿಯಲಿ
ಕಳ್ಳು ಬಳ್ಳಿಯ ತೆರದಿ
ಬೇರು ಬಿಟ್ಟ ಗಿಡ
ಮರ
ಕಾಗೆ ಗುಬ್ಬಿಗೆ ಆಶ್ರಯವ ಕೊಟ್ಟ
ಕಲ್ಲುಬೆಟ್ಟ ನನ್ನಪ್ಪ

ಕಾಲ ಕಾಲುಗಳ ನಡುವೆ
ಒಸರುವ ಬೆವರು
ಜೀವದಾಯಿನಿ ಜಲ
ಹರಿದು ಸಾಗಲು ಇಂಬು ಕೊಟ್ಟ
ಕಲ್ಲು ಬೆಟ್ಟ, ನನ್ನಪ್ಪ.

ಚಾಣ ಹಿಡಿದು
ಬೆನ್ನೇರಿ ಕುಳಿತು
ಪೆಟ್ಟು ಕೊಟ್ಟವರಿಗೆ
ಅಡಿಗಲ್ಲುಗಳ ಕೊಟ್ಟ
ನನ್ನಪ್ಪ ಕಲ್ಲುಬೆಟ್ಟ

ಬೆಣ್ಣೆಯಂಥ ಎದೆಯ ಮೇಲೆ
ಮುಳ್ಳು ಬೇಲಿಯ ಹರವಿ
ಉರಿವ ಬೆಂಕಿಯಿಟ್ಟವರಿಗೆ
ಗಟ್ಟಿ ಬಂಡೆಗಳ ಕೊಟ್ಟ
ನನ್ನಪ್ಪ, ಕಲ್ಲುಬೆಟ್ಟ

ತಲೆಗೇ ತೂತು ಕೊರೆದು
ತೋಪಿಟ್ಬು ಸಿಡಿಸಿ
ಕೈ ತೊಳೆದುಕೊಂಡವರ ಮನೆಗೆ
ತೊಲೆ ಕಂಬಗಳ ಕೊಟ್ಟ
ನನ್ನಪ್ಪ ಕಲ್ಲುಬೆಟ್ಟ

ಹಾರೆ ಹಿಡಿದು ?
ಹೊಟ್ಟೆ ಇರಿದು
ಕರುಳು ಬಗೆದವರಿಗೆ
ನನ್ನಪ್ಪ
ದೇವರನೇ ಕೊಟ್ಟು
ಪ್ರೀತಿಯೇ ಬೆಟ್ಟವಾದವನು
ಕಲ್ಲರಳಿ ಹೂವಾದವನು
*****