ಬಾನಿಂದೇನೋ ಇಳಿಯುತಿದೆ
ಬುವಿಯೆದೆಯೊಳಕ್ಕೆ
ಕಲ್ಪನೆ ಏನನೊ ಸೇರಿಸಿದೆ
ಕಾಣುವ ದೃಶ್ಯಕ್ಕೆ

ನದಿಯೆದೆಯಲ್ಲಿ ಮುಗಿಲಿನ ಕವಿತೆ
ಹುಣ್ಣಿಮೆ ಇರುಳಲ್ಲಿ,
ಬಾನಿನ ಹಾಡು ಮೂಡಿತು ಹೇಗೆ
ಭೂಮಿಯ ಶ್ರುತಿಯಲ್ಲಿ?

ನೋಟಕೆ ಶ್ರವಣಕೆ ತಿಳಿಯದ ಏನೋ
ಕಾಡಿದೆ ಎದೆಯಲ್ಲಿ
ಹೊಂಬಿಸಿಲಾಡಿದ, ಹಾಡಿದ ಗಾಳಿ
ಬಣ್ಣದ ಪೊದೆಯಲ್ಲಿ

ಕಾಣದ ಲೋಕದ ಕಲ್ಪತರುವಿಗೆ
ಕನಸಿತೇಕೆ ಜೀವ?
ಇದೆಯೋ ಇಲ್ಲವೊ ನಂಬಿದ ಜೀವಕೆ
ಮಧುರ ಹಾವಭಾವ

ಮರೆಗೆ ನಿಂತರೂ ಅಗೋ ನೆರಳು
ಬೇರೇನು ಸಾಕ್ಷಿ ಬೇಕು?
ಹುಡುಕುವಾಟಕ್ಕೆ ಕೊನೆಯೇತಕ್ಕೆ
ಲೀಲೆಯಷ್ಟೆ ಸಾಕು.
*****