ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ

ಹುಚ್ಚುನಾಯಿ ಬಂದು ಕಚ್ಚುತಿಹುದು ತಂಗಿ
ಎಚ್ಚರವಿರಲಿ ದಾರಿಹಿಡಿದು ನಡಿ                    || ಪ ||

ಅಚ್ಯತನೊಳು ಸೇರಿ ಅಜನ ತಲಿಗೆ ಹಾರಿ
ಹೆಚ್ಚಿನ ಋಷಿಗಳ ಬೆನ್ನತ್ತಿ ಕಾಡುವದಿದು            || ಅ. ಪ. ||

ಹರನ ಕಡಿದು ಕೈಯೊಳು ಕೊಡಿಸಿ ಕಪಾಲವ
ಭರದಿಂದ ಭಿಕ್ಷಕೆ ದೂಡಿತಿದು
ಸುರಲೋಕಕ್ಹೋಗಿ ಇಂದ್ರನ ಸರೀರದಿ ಬಹು-
ಪರಿ ಛಿದ್ರವ ಮೂಡಿಸಿತಿದು                        || ೧ ||

ನರ ಪಾಂಡುಪುತ್ರರೊಳು ಬೆರೆದು ಆರೋಗ್ಯದಿ
ಪರಿಭವಗೆಟ್ಟು ತಿರುತಿರುಗಾಡಿತಿದು
ಧರೆಯೊಳು ಗುಲಗಂಜಿಕೊಪ್ಪದೊಳಿರುವಂಥಾ
ಕುರಿಗಳ ಕಡಿದಬ್ಬರಿಸುತ ಬರುತದೆ                   || ೨ ||

ಯಾಕೆ ಬಂದೆವು ಈ ಊರೊಳಗದ್ಭುತ
ಸಾಕಿದಾವಿನಕರ ಕಡಿದಿತಂತೆ
ಬಾ ಕಂಡ್ಯಾ ಲಕ್ಷ್ಮೀಪುರಕೆ ಹೋಗುವ ಮಾರ್ಗದಿ
ಬೇಕೆಂದು ನಿಂತಡ್ಡಗಟ್ಟಿ ಬೊಗಳುವದೊ                || ೩ ||

ನಾಲ್ಕುಮಂದಿ ನಾವು ಏಕಾಗಿ ಹೋಗೋನು
ಜೋಕೆಯಿಂದದರಕಡೆ ನೋಡದಂತೆ
ಕಾಕುಜನರಿಗೆ ಕಣ್ಣಿಟ್ಟರೆ ಬಿಡದಮ್ಮಾ
ನೀ ಕೇಳೆ ಗೆಳತಿ ಇಲ್ಲ್ಯಾಕ ಕುಂತಿ                 || ೪ ||

ಬಳಲಿಸುವದು ಬ್ರಹ್ಮಾಂಡದೊಳಗೆ ಇನ್ನ
ಉಳಿಯೋದು ಕಷ್ಟ ನಾ ಯಾರಿಗ್ಹೇಳಲಿ
ಲಲನಾಮಣಿಯೆ ಅಚ್ಚಬಿಳೇದು ದೊಂಡೇದಬಾಲಾ
ತಿಳುನಡಾ ಜೋಲ್ಗಿವಿಯ ಬಾವಲಿ                      || ೫ ||

ಇಳಿಯೊಳೆಲ್ಲರ ಹಲ್ಲಲ್ಲ್ಹಿಡಿದು ಸವರುತ
ತಳಮಳಗೊಳಿಸಿತಿನ್ನ್ಯಾಂಗ ತಾಳಲಿ
ಚಲ್ವ ಶಿಶುನಾಳಧೀಶನೊಲಿಮಿಯಿಂದ
ತಿಳಿದು ಜ್ಞಾನದ ಮನಿಯೊಳಡಗಿರು ಕಂಡ್ಯಾ             || ೬ ||

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಬಕರಾ!
Next post ನಗೆ ಡಂಗುರ – ೨೮

ಸಣ್ಣ ಕತೆ

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ದಿನಚರಿಯ ಪುಟದಿಂದ

    ಮಂಗಳೂರಿನ ಹೃದಯ ಭಾಗದಿಂದ ಸುಮಾರು ೧೫ ಕಿ.ಮೀ. ದೂರದಲ್ಲಿರುವ ಚಿತ್ರಾಪುರ ಪೇಟೆ ಕೆಲವು ವಿಷಯಗಳಲ್ಲಿ ಪ್ರಖ್ಯಾತಿಯನ್ನು ಹೊಂದಿದೆ. ಸಿಟಿಬಸ್ಸುಗಳು ಇಲ್ಲಿ ಓಡಾಡುತ್ತಿಲ್ಲವಾದರೂ ಬಸ್ಸುಗಳಿಗೇನೂ ಕಮ್ಮಿಯಿಲ್ಲ. ಎಕ್ಸ್‌ಪ್ರೆಸ್ ಬಸ್ಸುಗಳು… Read more…

  • ಗುಲ್ಬಾಯಿ

    ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…

  • ಪ್ಲೇಗುಮಾರಿಯ ಹೊಡೆತ

    ಪ್ರಕರಣ ೧೩ ಕೆಲವು ದಿನಗಳ ತರುವಾಯ ತಿಪ್ಪೂರು ಹೋಬಳಿಯ ಪಾಠಶಾಲೆಗಳಿಂದ ಅನಿಷ್ಟ ವರ್ತಮಾನಗಳು ಬರಲಾರಂಭಿಸಿದುವು. ಹಳ್ಳಿಯಲ್ಲಿ ಪ್ಲೇಗುಮಾರಿ ಹೊಕ್ಕಿದೆ; ಒಂದೆರಡು ಸಾವುಗಳಾದುವು; ಜನರೆಲ್ಲ ಹೊಲಗಳಲ್ಲಿ ಗುಡಿಸಿಲುಗಳನ್ನು ಹಾಕಿಕೊಳ್ಳುತ್ತಿದಾರೆ;… Read more…

  • ಅವಳೇ ಅವಳು

    ಇತ್ತೀಚೆಗೆ ಅವಳೇಕೋ ತುಂಬಾ ಕಾಡುತ್ತಿದ್ದಾಳೆ- ಮೂವತ್ತು ವರ್ಷಗಳೇ ಸಂದರೂ ಮರೆಯಾಗಿಲ್ಲ ಜೀವನದಲ್ಲಿ ಅದೆಷ್ಟೋ ನಡೆಯಬಾರದ ಅಥವಾ ನಡೆಯಲೇಬೇಕಾದ ಅನೇಕ ಘಟನೆಗಳು ನಡೆದು ಹೋಗಿವೆ. ದೈಹಿಕವಾಗಿ, ಮಾನಸಿಕವಾಗಿ, ವ್ಯಾವಹಾರಿಕವಾಗಿ,… Read more…