ಹಗಲ ಭಂಡವಾಳವು ಇರುಳ ಕಾರಖಾನೆಯ ಸೇರುವುದು
ಹಲ್ಲು ಮಸೆದು ಕಬಳಿಸಿತು ಯಂತ್ರ
ಮಂತ್ರವೂದಿ ಚೇತನಗೊಳಿಸಿತು ತಂತ್ರ
ಅವರಿವರ ಭಂಡವಾಳಗಳ ಮೇಲೆ ಹೂಡಿದ
ಬೃಹದುದ್ಯಮವಿದು
ಬಡ್ಡಿಗೆ ಬಡ್ಡಿ ಸೇರಿ ಬೊಡ್ಡೆ ಬಲಿತಿದೆ
ಮೂಲ ಅಸಲೆಲ್ಲೋ ಒಂದೆರಡು ಹನಿ,
ಹನಿಹನಿ ಸೇರಿಹಳ್ಳ, ಹಳ್ಳ ಹಳ್ಳ ಸೇರಿ ಸಾರವಾಗಿದೆ,
‘ಯಾರದೋ ರೊಕ್ಕಾ ಎಲ್ಲವ್ವನ ಜಾತ್ರೆ’ ಎಂದು
ಏಳು ಕೊಳ್ಳದೊಳಗಾಳ ಕೊಳ್ಳದಲ್ಲಿ ಗಂಡು ಹೆಣ್ಣು ಭೇದವಳಿದು
ಜೋಗಿತಿಯಾದಾಗ ‘ಎಲ್ಲಿ ಕಾಣೆಲ್ಲಿ ಕಾಣೆ, ಎಲ್ಲವ್ವನಂತಾಕೀನ’
ಎಂದು ಚಕ್ರ ತಿರುಗೇ ತಿರುಗಿ,
ಹಲ್ಲು ಮಸೆದೇ ಮಸೆದು
ಆಹಾರ ಸವೆದೇ ಸವೆಯುತ್ತಿದೆ
*****