ಜೇನು ನಾವು
ನೋವು ನಾವು
ಕೈಗೆ ಸಿಕ್ಕರೆ
ಒಸಗಿ ಹಾಕುವಿರೆಂಬಾ ಶಂಕೆ!
ಊದಿದಾ ಶಂಕು ಊದೂತ್ತಾ
ಗಿಳಿ ಪಾಠ ಒಪ್ಪಿಸುತ್ತಾ
ನಿತ್ಯ ಜಿಗಿ, ಜಿಗಿದು, ಕುಣಿ, ಕುಣಿದು, ಹಾರುತ್ತಾ
ಏಳು ಕೆರೆ, ನೀರು ಕುಡಿದು
ಹೂವಿಂದಾ ಹೂವಿಗೇ ಹಾರಿ,
ನಿಮ್ಮ ಕಾಲ ಬಳಿ ಸಾರಿ,
ಮಕರಂದಾ ಹೀರಿ
ಜೇಡರದೀ…
ಪರಿಶ್ರಮದಿ…
ನಮ್ಮೀ ಜೀವನ!
೧
ನಿತ್ಯ ದುಡಿಮೆ ಸದಾ ನೆಮ್ಮದಿ!
ದುರಾಸೆ ದುರುಳರೆ,
ನಮ್ಮ ಹುಟ್ಟಿಗೆ
ಕಲ್ಲು ಹೊಡೆವ ತುಡುಗರೆ,
ಶತ ಶತಮಾನದ ಸಿಹಿ ಸವಿ,
ಬಯಸಿ, ಬೊಗಸೆಗಟ್ಟಲೆ
ಜೇನು ಹೀರಿ ಹೀರಿ…
ರುಚಿ ಹತ್ತಿಸಿಕೊಂಡು,
ತೆವಲು ಹತ್ತಿಸಿಕೊಂಡು,
ಬೆನ್ನು ಅಟ್ಟಿಸಿಕೊಂಡು,
ಎಲ್ಲಿ ಅಡಗಿ ಕುಳಿತರೂ ಬಿಡದೆ,
ಹೊಡೆದಿರಿ
ಬಡೆದಿರಿ
ಭೋಗಿಸಿದಿರಿ
ಬಿಲ್ಲಿನಂತೆ ಬಗ್ಗಿಸಿದಿರಿ.
೨
ನಿಮ್ಮೀತಾತ ಮುತ್ತಾತರು
ತುಪ್ಪಕ್ಕಾಗಿ ನಮ್ಮ ತೊತ್ತಾಗಿಸಿ,
ಹಗಲಿರುಳು ಗೇಯಿಸಿಕೊಂಡು
ಕದ್ದು ಕದ್ದು ಕೇಯಿಸಿಕೊಂಡು,
ಕೊಬ್ಬಿದಾ ಕುಣಿಗಲ್ ಕುದುರೆಗಳು ಕೆನೆಯುತ್ತೀರಿ,
ಕತ್ತಿ ಮಸೆಯುತ್ತೀರಿ,
ಅಟ್ಟಹಾಸದಿ ಕಿಸೆಯುತ್ತೀರಿ!
ಹಸಿ ಹಸಿ ರಕ್ತ ಹೀರುತ್ತೀರಿ
ಹದದ ಚರ್‍ಮಾ ಸುಖಕ್ಕಾಗಿ
ಜೊಲ್ಲು ಸುರಿಸುತ್ತೀರಿ!
ನಮ್ಮ ಹುಟ್ಟು ನಿಮಗೆ
ಶತ ಶತಮಾನದ ಪರಿತಾಪ
ಜನ್ಮ ಜನ್ಮಾದ ಶಾಪ!
ನಿತ್ಯ ದೀಪ ಉರಿ ಉರಿದು
ಬೆಳಕ ತಾ ಸುಟ್ಟು ನೀಡುವಂತೆ,
ನಮ್ಮೀ ಸಿಹಿ ಸಿಹಿ ಸವಿ ನಿಮಗೆ
ಎಂದೂ ತಪ್ಪದ ತುಪ್ಪ ನಿಮಗೆ!
೩
ಅಯ್ಯೋ! ಹೆಪ್ಪಿಟ್ಟಿತು ರಕ್ತ
ತೃಪ್ತಿ ಪಡಿಸಲು ನಾವೇ ಶಕ್ತ
ಇಷ್ಟಾದರೂ ಬಹಿಷ್ಕಾರ, ಕೊಲ್ಲುವುದು, ಏಕೆ?!
ಬೆಂಕಿಯಿಟ್ಟು ನಮ್ಮನು
ಹೊಗೆಯೆಬ್ಬಿಸಿ
ಒಕ್ಕಲೆಬ್ಬಿಸಿ
ದಿಕ್ಕಾಪಾಲಾಗಿಸಿದ್ದು ಸುಮ್ಮನೆ!
ನಿಮ್ಮ ವಕ್ರ ಬುದ್ಧಿ ಬಿಮ್ಮನೆ!!
ನಮ್ಮ ಪಾಲಿಗೆ, ಬರೀ ನೋವು
ಕಣ್ಣು ಕೆಂಡ ಸಂಪಿಗೆ, ನಿಗಿ ನಿಗಿ
ಕಡು ತಲೆ ತಾಪ, ಕೋಪ…
೪
ಸಾಕು! ಸಾಕು… ನಿಮ್ಮೀ ಹುಚ್ಚು ಹುಚ್ಚಾಟ!
ಕೆರಳಿ ಸಿಂಹಾಗಿದ್ದೇವೆ-
ಖಂಡಿತ ನಾವೀಗ ಕಚ್ಚುವೆವು…
ಹುಚ್ಚರಂತೆ ನಿಮ್ಮ ಓಡಿಸದೆ ಬಿಡೆವು!!
ಇನ್ನಿಮ್ಮ ಹುಟ್ಟಾಡಗಿಸದೆ ಬಿಡೆವು.
ಎಚ್ಚರ…
ಬಲು ಎಚ್ಚರ…
*****
(ಸ್ಫೂರ್ತಿ: ೧೯೯೮ರಲ್ಲಿ ನನ್ನ ಕವಿಮಿತ್ರ, ಮೈಸೂರು ಲೋಕೇಶ್‌ನೊಂದಿಗೆ, ಯಾಣಕ್ಕೆ ಭೇಟಿ ಮಾಡಿದ ರಾತ್ರಿ, ತಂಗುದಾಣದಲ್ಲಿ ರಚಿಸಿ, ವಾಚಿಸಿದ ಕವಿತೆಯಿದು…)