ಮೂರು ಮಂದಿ ಜಾಣರು
ಅವರಿಗಷ್ಟೇ ಕೋಣರು
ಒಮ್ಮೆ ಮೂರೂ ಕೋಣರು
ತಪ್ಪಿಸಿಕೊಂಡು ಹೋದರು

ಅವರ ಹುಡುಕಿ ಹೊರಟರು
ಮೂರು ಮಂದಿ ಜಾಣರು
ಕಂಡವರೆಲ್ಲರ ಕೇಳಿದರು
ಎಲ್ಲಿ ನಮ್ಮ ಕೋಣರು?

ದುಂಡು ದುಂಡು ಧಡಿಯರು
ಉಂಡು ತಿಂದು ಭಂಡರು
ಕತ್ತಲಲ್ಲಿ ಕಾಣಿಸರು
ಅಷ್ಟು ಕರಿಯ ದಿಂಡರು

ಜನರಂದರು ಬಿಳಿಯರ
ಕಂಡಿದ್ದೇವೆ ಮೂವರ
ಕಂಡಿಲ್ಲ ನಾವು ಕರಿಯರ
ನೀವನ್ನುವ ಧಡಿಯರ

ಮೂರು ಮಂದಿ ಜಾಣರು
ಮುಂದೆ ಮುಂದೆ ಹೊರಟರು
ಕೇರಿಯಲಿಲ್ಲ ಕೋಣರು
ಏರಿಯಲಿಲ್ಲ ಕೋಣರು

ಕಾಡಿನಲ್ಲೂ ಇಲ್ಲರು
ತಲಕಾಡಿನಲ್ಲೂ ಸಲ್ಲರು
ನಾಡಿನಲ್ಲೂ ಕಾಣರು
ವಯನಾಡಿನಲ್ಲೂ ಮಾಣರು

ಮುತ್ತುತ್ತಿದೆ ಎತ್ತಲೂ
ಕರ್ಗಾಣ ಕತ್ತಲು
ಇನ್ನೆಲ್ಲಿಯ ಹುಡುಕಾಟ
ಸೊಳ್ಳೆ ನುಸಿ ಕಾಟ

ಮೂರು ಕರೀ ಕೋಣರು
ಬೂದಿಯಲ್ಲಿ ಬಿದ್ದಿದ್ದರು
ಬೀಳುವಾಗ ಕರಿಯರು
ಏಳುವಾಗ ಬಿಳಿಯರು

ಜಾಣರಿಗಿಂತ ಜಾಣರು
ಮೂರು ಕರಿಯ ಕೋಣರು
ಈಗ ಅವರು ಬಿಳಿಯರು
ಕೆರೆಬಳಿ ಮಾತ್ರ ಸುಳಿಯರು!

ಎಲ್ಲಾ ಬಣ್ಣ ಬಯಲಾಗುವುದು
ಮಳೆಯೊಂದು ಬಂದರೆ
ಅಷ್ಟರೊಳಗೆ ಗಡಿದಾಟಿದರೆ
ಮತ್ತಿಲ್ಲ ತೊಂದರೆ!

ಎಂದುಕೊಂಡು ಓಡುತ್ತಾವೆ
ಬೆಟ್ಟದಲ್ಲಿ ಧುಡು ಧುಡು
ಮೋಡಗಳೂ ಧಾವಿಸ್ತಾವೆ
ಬಾನಿನಲ್ಲಿ ಗುಡು ಗುಡು!
*****