ಹೊಟ್ಟೆಪಾಡು ನೋಡಿ
ಅಗೊಮ್ಮೆ ಈಗೊಮ್ಮೆ ಬೆಕ್ಕಿನ ಹೆಜ್ಜೆ
ಇಡಬೇಕಾದ ಪ್ರಸಂಗ
ಹದಿನೆಂಟರ ಸುಂದರಿ
ನಗು ಮಾತು ಅಷ್ಟಕ್ಕಷ್ಟೇ
ಕುಹಕಿಗಳು ಇದು ಸೈಕಿಕ್ ಇರಬೇಕಂದದಷ್ಟೆ.
ಯಾರಿಗೂ ಗೊತ್ತಿಲ್ಲ ಅವಳು ಯಾರು!

ರಾಜಕುಮಾರಿ ಗಂಭೀರವದನೆ
ಮದವೇರಿದ ಕಣ್ಣುಗಳಿಗೆ
ಮಧು ತುಂಬಿಟ್ಟ ಗಾಜು ಹೂಜೆ
ತಿಳು ಸೊಂಟ ನೀಲಿ ಕಣ್ಣು
ಬಿರಿದ ತುಟಿ ತುಂಬೆಲ್ಲ ಕೃತಕನಗು
ಅರೆಬೆತ್ತಲಿನ ಕ್ಯಾಟ್‌ವಾಕ್ ಹುಡುಗಿ
ಯಾರಿಗೂ ಗೊತ್ತಿಲ್ಲ ಅವಳು ಯಾರು!

ಹೆಸರು ವಿಳಾಸ ಕೇಳಿದಷ್ಟು
ಫೋನ್ ಇಲ್ಲ, ಈ ಊರಿನವಳೇ ಅಲ್ಲ-
ನೂರೆಂಟು ನೆಪ ಹೇಳಿ
ಒಳಗೊಳಗೇ ಕೊರಗಿ
ಕಣ್ಣು ತುಂಬಿಕೊಳ್ಳುವ ಹುಡುಗಿ
ಯಾರಿಗೂ ಗೊತ್ತಿಲ್ಲ ಅವಳು ಯಾರು!

ಬಟ್ಟೆ ಬರೆ ಚಿನ್ನಾಭರಣ
ಮಿಕ್ಸಿ, ಸೋಪು ಓಪೇರಾಗಳಿಗೆ
ಪಾರದರ್ಶಕ ಬಟ್ಟೆಯ ನಾಜೂಕಿನ
ಕ್ಯಾಟ್‌ವಾಕ್ ಹುಡುಗಿ ಮಾಡೆಲ್‌ಗರ್ಲ್
‘ಸುಜಿ’ ಅಷ್ಟೇ ಪರಿಚಯ.
“ಸೌಂದರ್ಯ ಸ್ಪರ್ಧೆಯ ಸುಂದರಿ
ಮಿಸ್ ಬೆಂಗಳೂರ”
ಕಿರೀಟು ಧರಿಸಿದ್ದು ಕೇವಲ ಕಿರುನಗೆ
ಒಳಗೊಳಗೆ ಅವಳೆದೆಗೆ ಹರಿತಚೂರಿ
ಯಾರಿಗೂ ಗೊತ್ತಿಲ್ಲ ಅವಳು ಯಾರು! ಎಲ್ಲಿಯವಳು.

ಪತ್ರಿಕೆಯ ಮುಖಪುಟಕೆ ಗ್ರಾಸು ‘ಸುಜಿ’
ವಿವರ ಹುಡುಕುವ ತಡಪಡಿಕೆ ಟಿ.ವಿ. ಪೇಪರದವರಿಗೆ –
ಮೂಲಕಥೆ ಹೊರಗೆಡವಲು ಆತಂಕ
ವೇಶ್ಯೆಯ ಮಗಳೆನ್ನುವ ಹಿಂಸೆಗೆ
ನೇಣು ಹಾಕಿಕೊಂಡ ‘ಸುಜಿ’
ಸೂಳಿಗೇರಿಗೆಲ್ಲ ಆಶ್ಚರ್ಯ.

ಮರುದಿನ ಮುಖಫುಟಕೆ
ನೇಣು ಚಿತ್ರ, ಮೇಲೆ ತಲೆಬರಹ
“ಅವಳು ಯಾರು ಆಗಿಯೇ ಉಳಿಸಬಹುದಿತ್ತು”
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)