ಆಕಾಶವೇ ನೀಲಿ
ಪರದೆ
ಹಿಂದೆ
ಖಾಲಿ ಕುರ್ಚಿಗಳ
ಸಾಲು
ಮುಂದೆ
ಭಾಷಣದ ವಸ್ತು
‘ದಾರಿಯಾವುದಯ್ಯಾ ಮುಂದೆ?’
ಭಾಷಣಕಾರ:
ಶ್ರೀಮಂತ
ದಲಿತ ಕವಿ!
ರಾಜಕಾರಣಿಯೊಬ್ಬ
‘ಸಾಹಿತ್ಯವೆಲ್ಲಾ ಬೂಸ’ ಎಂದು ಕರೆದದ್ದು
ನೆನಪಿತ್ತು
ಕೇಳುತ್ತ ಕುಳಿತೆ
‘ಕಾವ್ಯವೆಂದರೆ?’
ಹೊಟ್ಟೆಯ ಸಿಟ್ಟು ರಟ್ಟೆಗೆ
ಹಸಿದ ಹೊಟ್ಟೆ ಹಿಟ್ಟಿಗೆ
ಸೀಟು ನೋಟು ಹಟ್ಟಿಗೆ…’
ಅಂತೆ ಕಂತೆಗಳ ಸಂತೆ
ಯಲಿ
ದಲಿತರ ನೋವು
ನಿರಾಸೆ
ಸಿಟ್ಟು-ಸೆಡವು
ಕಾವ್ಯವಾಗುವದು
ಹೇಗೆ?
ದೂರದಲಿ ರೈಲೊಂದು
ಸಿಳ್ಳೆ
ಹಾಕುತ್ತ ಹಾರಿ ಹೋಯಿತು
ಮಗ್ಗುಲು ಹೊರಳಿಸಿ
ಬಲಗಾಲ ಮೇಲೆ
ಎಡಗಾಲನಿಟ್ಟೆ
ತೊಟ್ಟ ಚಪ್ಪಲಿ
ಕೆಳಗೆ ಬಿಟ್ಟೆ
ಪಿಸುಗುಟ್ಟಿದನೊಬ್ಬ ಪಕ್ಕದಲಿ
‘ಏನು ಮಾತೋ;
ಕೂದ್ಲು ಸುಟ್ರೆ
ಇದ್ಲಲ್ಲ ಬೂದ್ಯಲ್ಲ ಎಲ್ಲಾ ತೌಡು’
ವೇದಿಕೆಯ ಮೇಲೆ
ಹೂದಾನಿ
ಅದರೊಳಗೆ ನಗುವ ಕಾಗದ
ದ ಹೂಗಳು
ಕರಿಯನೊಬ್ಬ ಆಕಳಿಸಿದ
ಕಾಣಲಿಲ್ಲ
ಬ್ರಹ್ಮಾಂಡ
ಮುಂಗಾರು ಮಳೆ
ಯಂತೆ ಭಾಷಣ
ಭೋರ್ಗರೆದ ಚಪ್ಪಾಳೆ
ಮೇಲೊಂದಿಷ್ಟು
ಬಿಸಿ ಕಾಫಿ
ಜನ
ಕೈ ಕುಲುಕಿ ಹಲ್ಕಿರಿದರು
ಎದ್ದು
ಕುಂಡಿ ಜಾಡಿಸಿಕೊಂಡೆ
ಚಪ್ಪಲಿಗಳು
ಮಾತಾಡಿಕೊಂಡು ನಕ್ಕವು
ನೀನು ಬಲ
ನಾನು ಎಡ
ದಾರಿ ಯಾವುದಯ್ಯಾ ಮುಂದೆ?
*****