ಚಿತೆಗೋ ಚಿಂತೆಗೋ
ನಾಲ್ಕೆಂಟು ಗೆರೆಗಳು ಹಣೆಗೆ
ವಿಂಡ್ಸರ್‌ ಮ್ಯಾನ್‌ರಿನ ಕಾಫಿ ಬಾರಿನಲ್ಲಿ
ಕಾಣಿಸಿಕೊಂಡ. ಎಲ್ಲೋಽನೋಡಿದಂತಿದೆ…

ಬೋಳುತಲೆ ಸೂಟು ಟೈ,
ಮಾಲೀಕನಂತೆಯೂ ಅಲ್ಲ ಮಾಣಿಯೂ ಅಲ್ಲ
ವಿಗ್ ಹಾಕಿ ಸಾದಾ ಶರ್ಟ್ ತೊಡಿಸಿ
ಹುಡುಕಿದ್ದೇ ಹುಡುಕಿದ್ದು.

ಸಿಕ್ಕುಬಿದ್ದ ಅನಾಥ
ತಪ್ಪಿಲ್ಲದ್ದಕ್ಕೆ ಒದೆ ತಿಂದು
ಬದುಕಿನರ್ಥ ಕಳೆದುಕೊಂಡ ಅವನು
ಸಮಾಧಾನ ಮಾತುಗಳಿಗೆ ಹಂಬಲಿಸಿ
ನಾಲ್ಕು ಮಾತುಗಳು ನನ್ನೊಡನೆಯೂ ಹೇಳಿದ್ದ;
ಊರು ತೊರೆದನೊ ಬಾವಿ ಕೆರೆ ಸೇರಿದನೊ!
ಹುಡುಕುವವರಾರು ಅಳುವವರಾರು?

ಮತ್ತೊಮ್ಮೆ ಹೋಗಿದ್ದೆ ಕಾಫಿಗೆ
ಅವನ ಶಬ್ದಕ್ಕೆ ನೂರು ಪ್ರಶ್ನೆಯಾಗಿರಬೇಕು
ನೋಡಿದ ನೋಡಿದ
ಮೂಕನಂತೆ ಹೊರಟು ಹೋದ
ಅನಾಥ ಪ್ರಜ್ಞೆಯ ಅದೇ ನಡಿಗೆ
ಮಂದಬೆಳಕಿನಲ್ಲಿ ಕಾಫಿ ಆರಿದ್ದು ಗೊತ್ತಾಗಲಿಲ್ಲ.

ಕಾಣೆಯಾದವ ಸಿಕ್ಕರೂ
ಮತ್ತೆ ಕಾಣೆಯಾದ
ವಿಂಡ್ಸರ್‌ದಲ್ಲಿ ಅವನ ಅಡ್ರೆಸ್ಸ್ ಇಲ್ಲ
ಅವನ ಹುಡುಕಾಟದಲಿ
ನಾನು ಕಾಫಿ ಕುಡಿದದೆಷ್ಟೋ, ಸುತ್ತಾಡಿ
ಪೆಟ್ರೋಲ್ ಕಳೆದದ್ದೆಷ್ಟೊ…
*****

Latest posts by ಲತಾ ಗುತ್ತಿ (see all)