ಸಿಂಗಲ್ ಡಬಲ್ ಬೆಡ್‌ರೂಂಗಳ
ಹೌಸಿಂಗ್ ಕಾಂಪ್ಲೆಕ್ಸ್ ಗಗನಚುಂಬಿ
ಮನೆಗಳಲಿ ಒಂದೊಂದೇ ಸಂತಾನ

ತೊಟ್ಟಿಲು ಅಮ್ಮನ ಎದೆಹಾಲು ಗೊತ್ತಿಲ್ಲ
ಬೇಬಿ ಸಿಟ್ಟಿಂಗ್ ನರ್ಸರಿಯ
ಸ್ನೇಹಿತರೊಂದಿಗೆ ಮಾತನಾಡಿ
ದಿನ ಕಳೆಯುವಾಗ
ದುಡಿದ ಮಮ್ಮಿ ಸುಸ್ತಾಗಿ ಮನೆ ಸೇರುತ್ತಾಳೆ.

ಎಟುಕಲಾರದ ಆಸೆಗೆ ನಿರಾಸೆಯೋ
ಸಂದೇಹ ತಪ್ಪುತಿಳಿವಳಿಕೆಗಳ ಆಕ್ರೋಶವೋ
ಪಪ್ಪಾ ಸುಸ್ತಾಗುತ್ತಿದ್ದಂತೆಯೇ
ಬೀರು ಕುಡಿದು ಸಿಗರೇಟು ಸೇದಿ
ಟಿ. ವಿ. ಹಚ್ಚುತ್ತಾನೆ.

ಮುಸ್ಸಂಜೆಗೆ ಮೊಗ್ಗು ಅರಳಿ ಘಮ ಘಮಿಸದೇ
ಮುದುರಿ ಮೌನ ಹೊತ್ತು
ರಗ್ಗಿನೊಳಗೆ ಪಿಳಿಪಿಳಿ ಕಣ್ಣು ಬಿಟ್ಟು
ಅಮ್ಮ ಅಪ್ಪನ ಸ್ಪರ್ಶ
ಅಜ್ಜಿಯ ಕಥೆಗಳಿಲ್ಲದೆ
ಕತ್ತಲೆಯೊಳಗೆ ಮೂಕ ಕುರುಡ
ಹೆಳವನಾಗಿ ನಿದ್ದೆ ಹೋದದ್ದು
ಬೆಳಿಗ್ಗೆ ಅಂತಃಕರಣಕ್ಕೆ ಸವಾಲಾಗುತ್ತದೆ.
*****

ಲತಾ ಗುತ್ತಿ
Latest posts by ಲತಾ ಗುತ್ತಿ (see all)